ನಿಗಮಗಳು ರಾಜಕೀಯ ನಿರಾಶ್ರಿತರ ತಾಣವಾಗಬಾರದು

logo
Published on

ಮಡಿಕೇರಿ: ಸರ್ಕಾರ ಬದಲಾಗಿ ನೂತನ ಸರ್ಕಾರ ಬಂದ ಸಂದರ್ಭದಲ್ಲಿ ವಿವಿಧ ನಿಗಮ ಹಾಗೂ ಸಾಹಿತ್ಯ ಅಕಾಡೆಮಿಗಳಿಗೂ ನೂತನ ಅಧ್ಯಕ್ಷರು ಹಾಗೂ ಸಮಿತಿಯನ್ನು ರಚಿಸುವುದು ವಾಡಿಕೆ. ಕೇವಲ ಅಧಿಕಾರದ ಆಸೆಯಿಂದ, ಅರ್ಹತೆಯೇ ಇಲ್ಲದವರು ಆಸೀನರಾಗಿ ಸರ್ಕಾರ ಹಾಗೂ ಆಯಾ ಸಂಸ್ಥೆಯ ಉದ್ದೇಶವೇ ಬುಡಮೇಲಾಗುವ ಸಂಭವವೇ ಹೆಚ್ಚು ಎಂದು ಕೊಡವಾಮೆರ ಕೊಂಡಾಟ ಸಂಘಟನೆ ಅಧ್ಯಕ್ಷ ಚಾಮೇರ ದಿನೇಶ್ ಬೆಳ್ಯಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.


ಈ ಭಾರಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕೂಡ ಮಂಡಳಿ, ಅಕಾಡೆಮಿಗಳಿಗೆ ನೂತನ ಆಡಳಿತ ಮಂಡಳಿ ರಚನೆಯನ್ನೂ ಮಾಡಬೇಕಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗಲೂ ತನ್ನ ಕಾರ್ಯಕರ್ತರಿಗೆ ಅದರಲ್ಲೂ ಅಸಮದಾನಿತ ಮುಖಂಡರಿಗೆ ನಿಗಮ, ಮಂಡಳಿಗಳಲ್ಲಿ ಸ್ಥಾನ ಕೊಡುವ ಮೂಲಕ ಸಮಾಧಾನ ಪಡಿಸುವ ಪದ್ಧತಿಯಿದೆ. ಇದರಿಂದಾಗಿ ಎಷ್ಟೋ ಬಾರಿ ಸಾಹಿತ್ಯ ಅಕಾಡೆಮಿ ಮತ್ತು ಜನಾಂಗೀಯ ಅಭಿವೃದ್ಧಿ ನಿಗಮಗಳಲ್ಲಿ ಕೇವಲ ಅಧಿಕಾರದ ಆಸೆಯಿಂದ, ಅರ್ಹತೆಯೇ ಇಲ್ಲದವರು ಪಡೆಯುವ ಸಾಧ್ಯತೆಯಿದೆ. ಆದ್ದರಿಂದ ಅಕಾಡೆಮಿ ಮತ್ತು ಅಭಿವೃದ್ಧಿ ನಿಗಮ ರಾಜಕೀಯ ನಿರಾಶ್ರಿತರ ತಾಣವಾಗಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅತೀ ಸೂಕ್ಷ್ಮ, ಶ್ರಿಮಂತ ಸಂಸ್ಕೃತಿ ಮತ್ತು ಹಿನ್ನೆಲೆಯನ್ನು ಹೊಂದಿರುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ನೂತನವಾಗಿ ಅಸ್ತಿತಕ್ಕೆ ಬರಲಿರುವ ಕೊಡವ ಅಭಿವೃದ್ಧಿ ನಿಗಮಕ್ಕೆ ಸಮರ್ಥ ಮತ್ತು ಸಂಬಂತ ಹುದ್ದೆಯ ಅರಿವು ಇರುವ ಅನುಭವಿ, ಅಭಿಮಾನಿ ವ್ಯಕ್ತಿಗಳನ್ನೇ ಆಯ್ಕೆ ಮಾಡಬೇಕಿದೆ. ಕೇವಲ ರಾಜಕೀಯ ನೆಲೆಗಟ್ಟನ್ನು ಮಾತ್ರ ಪರಿಗಣಿಸದೆ, ಅಳಿವಿನಂಚಿನಲ್ಲಿರುವ ಅಜನಾಂಗ ಹಾಗೂ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ಆಸಕ್ತಿ, ಅನುಭವ ಇರುವವರು ಅಧ್ಯಕ್ಷರಾದರೆ, ಇಡೀ ಸಮುದಾಯದ ಜತೆಗೆ, ಸರ್ಕಾರಕ್ಕೂ ಹಿರಿಮೆ ತಂದುಕೊಡಲಿದೆ.

ಕೇವಲ ರಾಜಕೀಯ ಮಾನದಂಡ ಒಂದನೇ ನೆಪವಾಗಿಟ್ಟರೆ, ಮೂರು ವರ್ಷದ ಅಧಿಕಾರಾವಧಿ ಕೇವಲ ಸಭೆ ಸಮಾರಂಭಗಳು ಮತ್ತು ಅನಾವಶ್ಯಕ ದುಂದು ವೆಚ್ಚಕಷ್ಟೇ ಸೀಮಿತವಾಗಲಿದೆ. ಹೀಗಾಗಿ ನೂತನ ಸರ್ಕಾರ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ನೂತನ ಕೊಡವ ಅಭಿವೃದ್ಧಿ ನಿಗಮದ ಅಧ್ಯಕ್ಷ/ ಆಡಳಿತ ಮಂಡಳಿಯ ಆಯ್ಕೆಯಲ್ಲಿ ಪ್ರಬುದ್ಧತೆಯೊಂದಿಗೆ, ರಾಜಕೀಯಾತೀತ ಅರ್ಹರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net