ಪಾಲಿಕೆ ವಲಯ ಕಚೇರಿವಾರು ಜಿಐಎಸ್ ಟೆಂಡರ್

HDMC OFFICE
Published on

ಸಂತೋಷ ವೈದ್ಯ ಹುಬ್ಬಳ್ಳಿ

ಆದಾಯ ಹೆಚ್ಚಿಸಿಕೊಳ್ಳಲು ಜಿಐಎಸ್ (ಜಿಯೋಗ್ರಾಫಿಕ್ ಇನ್​ಫಾಮೇಶನ್ ಸಿಸ್ಟಮ್ ಸರ್ವೆ ಕೈಗೊಳ್ಳುವುದು ಅನಿವಾರ್ಯ ಎಂಬುದು ಹು-ಧಾ ಮಹಾನಗರ ಪಾಲಿಕೆಗೆ ಅರಿವಿಗೆ ಬಂದಂತಿದೆ. ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಪಾಲಿಕೆ ಸರ್ವೆ ಕಾರ್ಯ ತ್ವರಿತವಾಗಿ ಪೂರ್ಣಗೊಳ್ಳಲಿ ಎಂಬ ಉದ್ದೇಶದಿಂದ ವಲಯ ಕಚೇರಿವಾರು ಇ-ಟೆಂಡರ್ ಕರೆಯಲು ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ವಿಭಾಗವಾರು 3 (ಹುಬ್ಬಳ್ಳಿ ಉತ್ತರ, ಹುಬ್ಬಳ್ಳಿ ದಕ್ಷಿಣ ಹಾಗೂ ಧಾರವಾಡ) ಪ್ಯಾಕೇಜ್​ಗಳಲ್ಲಿ ಟೆಂಡರ್ ಕರೆದರೆ ಸರ್ವೆ ಕಾರ್ಯ ಪೂರ್ಣಗೊಳಿಸಲು 2-3 ವರ್ಷಗಳೇ ಬೇಕಾಗಬಹುದು. ಹಾಗಾಗಿ ವಲಯವಾರು 12 (ವಲಯ ಕಚೇರಿಗಳು) ಪ್ಯಾಕೇಜ್​ಗಳಲ್ಲಿ ಟೆಂಡರ್ ಕರೆಯಲು ನಿರ್ಧರಿಸಿದೆ. ಇದರಿಂದ 6ರಿಂದ 9 ತಿಂಗಳಲ್ಲಿ ಸರ್ವೆ ಕಾರ್ಯ ಮುಕ್ತಾಯಗೊಳ್ಳಲಿದೆ ಎಂಬುದು ಪಾಲಿಕೆಯ ಲೆಕ್ಕಾಚಾರ.

ಪ್ರತ್ಯೇಕವಾಗಿ 12 ಪ್ಯಾಕೇಜ್​ಗಳಲ್ಲಿ ಟೆಂಡರ್ ಕರೆದಾಗ ಹೆಚ್ಚು ಕಂಪನಿ ಅಥವಾ ಸಂಸ್ಥೆಗಳು ಜಿಐಎಸ್ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲು ಅವಕಾಶವಿರುತ್ತದೆ. ಆಗ ಕೆಲಸದ ಟೆಂಡರ್ ಹಿಡಿಯುವ ಪ್ರತಿಯೊಬ್ಬರೂ ಪ್ಯಾಕೇಜ್​ಗೆ ಅನುಗುಣವಾಗಿ ಪ್ರತ್ಯೇಕವಾಗಿ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ತ್ವರಿತವಾಗಿ ಸರ್ವೆ ಕಾರ್ಯ ಮುಕ್ತಾಯಗೊಳಿಸಲು ಸಾಧ್ಯ. ಮೇಲಾಗಿ ಪಾಲಿಕೆಯ ಪ್ರತಿ ವಲಯ ಕಚೇರಿಯ ಅಧಿಕಾರಿಗಳು ತಮ್ಮ ಕಚೇರಿ ವ್ಯಾಪ್ತಿಯ ಸರ್ವೆ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳಬಹುದು.

2 ಕೋಟಿ ರೂ. ಅಂದಾಜು

ಪ್ರತಿ ವಲಯ ಕಚೇರಿ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ಕೈಗೊಳ್ಳಲು ಪಾಲಿಕೆ 2 ಕೋಟಿ ರೂ. ಅಂದಾಜು ಮೊತ್ತ ನಿಗದಿಪಡಿಸಿದೆ. ಇದು ಗರಿಷ್ಠ ಮೊತ್ತವಾಗಿದ್ದು, ಅಂತಿಮವಾಗಿ ಪ್ರತಿ ಪ್ಯಾಕೇಜ್ 1.4ರಿಂದ 1.6 ಕೋಟಿ ರೂ. ಗೆ ನಿಗದಿಯಾಗಬಹುದು. ಒಟ್ಟಾರೆ 15-18 ಕೋಟಿ ರೂ. ಮೊತ್ತದಲ್ಲಿ ಅವಳಿ ನಗರದ ಜಿಐಎಸ್ ಸರ್ವೆ ಕಾರ್ಯ ಪೂರ್ಣಗೊಳ್ಳಬಹುದು ಎಂಬುದು ಪಾಲಿಕೆಯ ಅಧಿಕಾರಿಗಳ ಲೆಕ್ಕಾಚಾರ.

ದಶಕದ ಹಿಂದೆ ಪಾಲಿಕೆ ಜಿಐಎಸ್ ಸರ್ವೆಗೆ ಟೆಂಡರ್ ಕರೆದಾಗ ಟೆಂಡರ್ ಮೊತ್ತ (6 ಕೋಟಿ ರೂ.) ಅಧಿಕ ಎಂಬ ಕಾರಣಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆ ಸಿಕ್ಕಿರಲಿಲ್ಲ. ವಲಯವಾರು ಟೆಂಡರ್ ಕರೆದಾಗ ಪ್ರತಿ ಪ್ಯಾಕೇಜ್ ಮೊತ್ತ ಕಡಿಮೆಯಾಗುತ್ತದೆ. ಇದರಿಂದ ಸ್ಥಳೀಯವಾಗಿ ಟೆಂಡರ್ ಅನುಮೋದನೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದು ಎಂಬುದು ಪಾಲಿಕೆಯ ನಂಬಿಕೆಯಾಗಿದೆ.

ಈಗಾಗಲೇ ದುಬೈ, ಕೋಲ್ಕತ್ತ, ಪುಣೆ ಹಾಗೂ ಮುಂಬೈ ಮೂಲದ ಜಿಐಎಸ್ ಸರ್ವೆ ಕೈಗೊಂಡು ಅನುಭವವಿರುವ 2-3 ಕಂಪನಿ ಅಥವಾ ಸಂಸ್ಥೆಗಳ ಜತೆ ಪಾಲಿಕೆ ಅಧಿಕಾರಿಗಳು ಸಮಾಲೋಚನೆ (ಆನ್​ಲೈನ್ ಹಾಗೂ ಆಫ್​ಲೈನ್) ನಡೆಸಿದ್ದಾರೆ.

ಆದಾಯ ಹೆಚ್ಚಿಸುವ ಉದ್ದೇಶ

ಹುಬ್ಬಳ್ಳಿಯ ಹಳೇ ಗಬ್ಬೂರನಿಂದ ಧಾರವಾಡದ ಎತ್ತಿನಗುಡ್ಡದವರೆಗೆ ಸುಮಾರು 36 ಕಿ.ಮೀ. ಉದ್ದ ಹಾಗೂ ಹುಬ್ಬಳ್ಳಿಯ ತಾರಿಹಾಳದಿಂದ ಬಾಗಲಕೋಟೆ ರಸ್ತೆ ರೈಲ್ವೆ ಮೇಲ್ಸೇತುವೆವರೆಗೆ 18 ಕಿ.ಮೀ. ವರೆಗೆ ಪಾಲಿಕೆ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಪಾಲಿಕೆ ವ್ಯಾಪ್ತಿಯ ಎಲ್ಲ ಸ್ವರೂಪದ ಆಸ್ತಿಗಳನ್ನು ಗುರುತಿಸಿ, ಅಂತಹ ಆಸ್ತಿಗಳ ವಾಸ್ತವಿಕ ಸ್ಥಿತಿಯನ್ನು ಅರಿಯುವುದು ಹಾಗೂ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಜಿಐಎಸ್ ಸರ್ವೆಗೆ ಪಾಲಿಕೆ ಮುಂದಾಗಿದೆ.

ಪಾಲಿಕೆಗೆ ಬಹು ದೊಡ್ಡ ಆದಾಯ ಮೂಲವೇ ಆಸ್ತಿ ತೆರಿಗೆಯಾಗಿದೆ. 2023-24ನೇ ಸಾಲಿನಲ್ಲಿ ಪಾಲಿಕೆ ಆಸ್ತಿ ತೆರಿಗೆ ಮೂಲಕ ದಾಖಲೆಯ 117.18 ಕೋಟಿ ರೂ. ಸಂಗ್ರಹಿಸಿತ್ತು. 2024-25ನೇ ಸಾಲಿನಲ್ಲಿ 141.18 ಕೋಟಿ ರೂ. ಗುರಿ ಇಟ್ಟುಕೊಂಡಿದೆ. ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 34798 ವಾಣಿಜ್ಯ ಕಟ್ಟಡ, 1,81,148 ವಾಸದ ಕಟ್ಟಡ ಹಾಗೂ 1,22,656 ಖಾಲಿ ನಿವೇಶನಗಳು ಸೇರಿ 3,42,602 ಆಸ್ತಿಗಳಿವೆ.

ಜಿಐಎಸ್ ಸರ್ವೆಯಿಂದ ತೆರಿಗೆ ಜಾಲದಿಂದ ಬಿಟ್ಟು ಹೋಗಿರುವ ಆಸ್ತಿಗಳು ಪತ್ತೆಯಾಗಲಿವೆ. ವಸತಿ ಉದ್ದೇಶಕ್ಕೆ ಪರವಾನಗಿ ಪಡೆದು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿರುವ, ಒಂದು ಮಹಡಿ ಕಟ್ಟಡಕ್ಕೆ ಪರವಾನಗಿ ಪಡೆದು ಅನಧಿಕೃತವಾಗಿ 2-3 ಅಂತಸ್ತಿನ ಕಟ್ಟಡ ನಿರ್ವಿುಸಿರುವುದು ಗಮನಕ್ಕೆ ಬರಲಿದೆ. ಕಟ್ಟಡದ ಸ್ವರೂಪ (ಮಣ್ಣಿನ, ಆರ್​ಸಿಸಿ, ಶೆಡ್), ಟೈಲ್ಸ್ ಬಳಕೆ, ಎಲ್ಲವೂ ಲೆಕ್ಕಕ್ಕೆ ಬರಲಿದೆ. ಇವೆಲ್ಲದರಿಂದ ಆಸ್ತಿ ತೆರಿಗೆ ನಿಖರ ಲೆಕ್ಕ ಸಿಗಲಿದೆ.

ವಲಯವಾರು ಪ್ಯಾಕೇಜ್​ನಲ್ಲಿ ಟೆಂಡರ್ ಕರೆದರೆ ಜಿಐಎಸ್ ಸರ್ವೆ ಕಾರ್ಯ ತ್ವರಿತವಾಗಿ ಪೂರ್ಣಗೊಳ್ಳಲಿದೆ. ದೊಡ್ಡ ಪ್ಯಾಕೇಜ್​ಗಳಲ್ಲಿ ಟೆಂಡರ್ ಕರೆದಾಗ ಸರ್ವೆ ಕಾರ್ಯ ಪೂರ್ಣಗೊಳಿಸಲು ಸಹಜವಾಗಿ ವಿಳಂಬವಾಗಲಿದೆ. 1-2 ವರ್ಷ ವಿಳಂಬವಾದರೆ ವಾರ್ಷಿಕವಾಗಿ ತೆರಿಗೆ ಸಂಗ್ರಹದಲ್ಲಿ 200 ಕೋಟಿ ರೂ. ನಷ್ಟ ಸಂಭವಿಸಬಹುದು. | ಆರ್. ವಿಜಯಕುಮಾರ, ಇಇ (ಯೋಜನೆ), ಹು-ಧಾ ಮಹಾನಗರ ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net