ಕುಡಿಯುವ ನೀರಿನ ಮಿತ ಬಳಕೆಗೆ ಪಾಲಿಕೆ ಕೋರಿಕೆ

new water
Published on

ಹುಬ್ಬಳ್ಳಿ : ನಾಗರಿಕರು ನೀರನ್ನು ಮಿತವ್ಯಯವಾಗಿ ಬಳಸಿ, ನೀರಿನ ಉಳಿತಾಯ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಆಗುವ ತೊಂದರೆ ತಪ್ಪಿಸುವಂತೆ ಮಹಾನಗರ ಪಾಲಿಕೆ ಮನವಿ ಮಾಡಿದೆ.

ಪ್ರಸಕ್ತ ಸಾಲಿನಲ್ಲಿ ಸವದತ್ತಿಯ ರೇಣುಕಾ ಜಲಾಶಯದ ಹಾಗೂ ದುಮ್ಮವಾಡ ನೀರಸಾಗರ ಜಲಾಶಯದ ಜಲಾನಯನದ ಪ್ರದೇಶದಲ್ಲಿ ವಾಡಿಕೆಯಂತೆ ಮಳೆ ಆಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಗಣನೀಯವಾಗಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಲಭ್ಯವಿರುವ ನೀರನ್ನೇ ಮಳೆಯಾಗುವವರೆಗೆ ನಿರ್ವಹಣೆ ಮಾಡಬೇಕಾಗಿರುವುದರಿಂದ ನಾಗರಿಕರು ನೀರನ್ನು ಮಿತವ್ಯಯವಾಗಿ ಬಳಸುವಂತೆ ಕೋರಲಾಗಿದೆ.

ಮಹಾನಗರ ಪಾಲಿಕೆಯಿಂದ ಮಲಪ್ರಭಾ ನೀರನ್ನು ಖಾಸಗಿ ಬಳಕೆಗೆ ನೀಡುವುದನ್ನು ಈಗಾಗಲೇ ಬಂದ್ ಮಾಡಲಾಗಿದೆ. ಹೋಳಿ ಹಬ್ಬ ಹಾಗೂ ರಂಗಪಂಚಮಿ ಆಚರಣೆ ಸಂದರ್ಭದಲ್ಲಿ ಖಾಸಗಿ ಬೋರವೆಲ್​ನವರು ಮತ್ತು ಅವಳಿನಗರದ ಜನತೆ ನೀರಿನ ಮಿತಬಳಕೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸೂಚಿಸಿದೆ.

ಸಾರ್ವಜನಿಕರು ಕುಡಿಯುವ ನೀರಿಗೆ ಮಾತ್ರ ಟ್ಯಾಂಕರ್ ನೀರನ್ನು ಒದಗಿಸಲು ಕೋರಬೇಕು. ಟ್ಯಾಂಕರ್ ನೀರನ್ನು ಕುಡಿಯಲು ಮಾತ್ರ ಬಳಸಬೇಕು. ಅಗತ್ಯವಿರುವಷ್ಟೇ ನೀರನ್ನು ಮಾತ್ರ ಬಳಸಿ. ನೆಲಮಟ್ಟದ ಟ್ಯಾಂಕ್ ಹಾಗೂ ಸಿಂಟೆಕ್ಸ್ ಟ್ಯಾಂಕ್​ಗಳು ತುಂಬಿ ನೀರು ಪೋಲಾಗುವುದನ್ನು ತಡೆಯಬೇಕು. ಪೈಪ್ ಹಿಡಿದು ಕಾರು ಮತ್ತು ಇತರ ವಾಹನಗಳನ್ನು ತೊಳೆಯಬೇಡಿ. ಕುಡಿಯುವ ನೀರನ್ನು ಉದ್ಯಾನಗಳಿಗೆ ಬಳಸಬೇಡಿ. ಮನೆ ಅಂಗಳ ಸ್ವಚ್ಛಗೊಳಿಸಲು ನೀರನ್ನು ವ್ಯರ್ಥ ಮಾಡಬೇಡಿ. ಮನೆಯ ನಳಗಳಲ್ಲಿ ನೀರಿನ ಸೋರಿಕೆ ಇದ್ದರೆ ಅದನ್ನು ಕೂಡಲೇ ಸರಿಪಡಿಸಿಕೊಳ್ಳಿ. ನಗರದ ಯಾವುದೇ ಭಾಗದಲ್ಲಿ ನೀರಿನ ಪೈಪಿಗೆ ಹಾನಿಯಾಗಿ ನೀರು ಸೋರಿಕೆಯಾಗುತ್ತಿದ್ದರೆ ಅಥವಾ ವಾಲ್ ಗಳಲ್ಲಿ ಸೋರಿಕೆ ಕಂಡು ಬಂದರೆ ಹಾಗೂ ಯಾರಾದರೂ ಅನಗತ್ಯವಾಗಿ ನೀರು ಪೋಲು ಮಾಡುವುದನ್ನು ಗಮನಿಸಿದರೆ ನೀರು ಸರಬರಾಜು ಸಹಾಯವಾಣಿ ಕೇಂದ್ರಕ್ಕೆ (7996666247) ಕರೆ ಮಾಡುವಂತೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net