ದೇವರಾಜ ಮಾರುಕಟ್ಟೆಯಲ್ಲಿ ಟಾರ್ಪಾಲ್ ಹಾಕಿಕೊಳ್ಳಲು ಪಾಲಿಕೆ ಅನುಮತಿ

mysore
Published on

ಮೈಸೂರು: ನಗರದ ಐತಿಹಾಸಿಕ ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ನೆರಳಿಗಾಗಿ ಟಾರ್ಪಾಲ್ ಹಾಕಿಕೊಳ್ಳಲು ಮೈಸೂರು ಮಹಾನಗರ ಪಾಲಿಕೆ ಅನುಮತಿ ನೀಡಿದೆ.


ಮಾರ್ಚ್ 23ರಂದು ಪಾಲಿಕೆ ಅಧಿಕಾರಿಗಳು ಮತ್ತು ಗ್ಯಾಂಗ್‌ಮನ್‌ಗಳು ಮಾರುಕಟ್ಟೆಗೆ ದಾಳಿ ನಡೆಸಿ ತರಕಾರಿ, ಸೊಪ್ಪು, ಹಣ್ಣು-ಹಂಪಲು ಮತ್ತಿತರ ಹಸಿರು ಪದಾರ್ಥಗಳನ್ನು ಮಾರುತ್ತಿದ್ದ ಅಂಗಡಿಗಳ ಮೇಲೆ ನೆರಳಿಗಾಗಿ ಹಾಕಿದ್ದ ಟಾರ್ಪಾಲ್‌ಗಳನ್ನು ತೆರವು ಮಾಡಿದ್ದರು.

ಇದರಿಂದ ಬಿಸಿಲಿಗೆ ತರಕಾರಿ ಮತ್ತು ಸೊಪ್ಪುಗಳು ಒಣಗಿ ಹಾಳಾಗಿದ್ದವು. ಸಾಕಷ್ಟು ನಷ್ಟವೂ ಉಂಟಾಗಿತ್ತು. ಪಾಲಿಕೆ ಅಧಿಕಾರಿಗಳ ಕ್ರಮವನ್ನು ಖಂಡಿಸಿ ವ್ಯಾಪಾರಿಗಳು ತರಕಾರಿ ಮತ್ತು ಸೊಪ್ಪನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ನೆರಳಿಗೆ ಟಾರ್ಪಾಲ್ ಹಾಕಿಕೊಳ್ಳಲು ಅನುಮತಿ ನೀಡಬೇಕೆಂದು ಆಗ್ರಹಿಸಿದ್ದರು.


ಇದಕ್ಕೆ ಸ್ಪಂದಿಸಿದ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎನ್.ಎನ್. ಮಧು, ವಲಯ ಕಚೇರಿ 6ರ ಉಪ ಆಯುಕ್ತೆ ವೀಣಾ, ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಪರಿಸರ ಇಂಜಿನಿಯರ್ ಮೈತ್ರಿ ಅವರು ಸೋಮವಾರ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.


‘ವರ್ತಕರು ಪಾಲಿಕೆ ನಿಗದಿಪಡಿಸಿಕೊಟ್ಟಿರುವ ಸ್ಥಳದ ಒಳಭಾಗದಲ್ಲಿ ಮಾತ್ರ ಪದಾರ್ಥಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಬೇಕು. ಮಳೆ, ಬಿಸಿಲಿನ ರಕ್ಷಣೆಗಾಗಿ ನೀಲಿ ಅಥವಾ ಬಿಳಿ ಬಣ್ಣದ ಟಾರ್ಪಾಲ್ ಕಟ್ಟಿಕೊಳ್ಳಲು ಅವಕಾಶ ನೀಡಲಾಗುವುದು. ಗ್ರಾಹಕರು ತಿರುಗಾಡುವ ಸ್ಥಳದಲ್ಲಿ ಯಾವುದೇ ಸರಕುಗಳನ್ನು ಇಡಬಾರದು. ತಪ್ಪಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ’ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net