ನಿಗಮದ ಕಚೇರಿಗಳ ಮೇಲೆ ಎಸಿಬಿ ದಾಳಿ

01020112
Published on

ಬೆಳಗಾವಿ: ಸರ್ಕಾರ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಕಲ್ಪಿಸಲು ಫಲಾನುಭವಿಗಳಿಂದ ಹಣ ಪಡೆಯುತ್ತಿದ್ದ ದೂರಿನ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಗುರುವಾರ ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ನಿಗಮ ಮತ್ತು ದೇವರಾಜ ಅರಸು ಅಭಿವೃದ್ಧಿ ನಿಗಮದ ಕಚೇರಿಗಳ ಮೇಲೆ ದಾಳಿ ನಡೆಸಿ ಮಹತ್ವದ
ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಎಸ್‌ಸಿ, ಎಸ್‌ಟಿ, ಬಡವರು ಮತ್ತು ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ಕೃಷಿ ಜಮೀನುಗಳಿಗ ಕೊಳವೆ ಬಾವಿ ಕೊರೆಸಲು, ಜಮೀನುಗಳಿಗೆ ನೀರಾವರಿ ಸೌಕರ್ಯ, ಪ್ರವಾಸಿ ವಾಹನ ಖರೀದಿ, ಕೃಷಿ ಭೂಮಿ ಖರೀದಿ, ಸ್ವಂತ ಉದ್ಯೋಗ ನಡೆಸಲು ಆರ್ಥಿಕ ಸಹಾಯ, ವಸತಿ ಯೋಜನೆಯಡಿ ಮನೆಗಳ ಹಂಚಿಕೆ ಸೇರಿ ಇತರ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಫಲಾನುಭವಿಯಿಂದ 10 ರಿಂದ 20 ಸಾವಿರ ರೂ. ಲಂಚ ಪಡೆಯುತ್ತಿದ್ದಾರೆ.

ಕಚೇರಿಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಫಲಾನುಭವಿಗಳು ಮತ್ತು ಸಾರ್ವಜನಿಕರು ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಎಸಿಬಿ ಎಸ್ಪಿ ಡಿ.ಎಸ್. ನೇಮಗೌಡ ನೇತೃತ್ವದಲ್ಲಿ 40 ಅಧಿಕಾರಿಗಳ ನಾಲ್ಕು ತಂಡಗಳು ಏಕಕಾಲದಲ್ಲಿ ನಗರದಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ನಿಗಮ ಮತ್ತು ದೇವರಾಜ ಅರಸು ಅಭಿವೃದ್ಧಿ ನಿಗಮದ ಕಚೇರಿಗಳ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಕೆಲ
ದಾಖಲೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಹಣ ನೀಡಿದರಷ್ಟೇ ಸರ್ಕಾರಿ ಯೋಜನೆ ಸೌಲಭ್ಯ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿಗಳು ಫಲಾನುಭವಿಗಳನ್ನು ಆಯ್ಕೆ ಮಾಡಿ ಕಳುಹಿಸಿ ಕೊಡುತ್ತವೆ. ಆದರೆ, ನಿಗಮ ಕಚೇರಿಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗೆ ಕನಿಷ್ಠ 15 ರಿಂದ 20 ಸಾವಿರ ರೂ. ಲಂಚ ನೀಡಿದರೆ ಮಾತ್ರ ಸರ್ಕಾರಿ ಸೌಲಭ್ಯ ಸಿಗುತ್ತವೆ.

ಇಲ್ಲದಿದ್ದರೆ ವಿವಿಧ ಕಾರಣ ನೀಡಿ ಕಚೇರಿಗೆ ಅಲೆದಾಡಿಸುತ್ತಿದ್ದಾರೆ. 2 ರಿಂದ 3 ಲಕ್ಷ ರೂ. ಸಬ್ಸಿಡಿ ಸೌಲಭ್ಯ ಇಲ್ಲವೇ, ಕೊಳವೆ ಬಾವಿ ಕೊರೆಸುವ ಅನುದಾನ ಪಡೆಯಲು ಕನಿಷ್ಠ 30 ಸಾವಿರ ರೂ. ಲಂಚ ನೀಡಬೇಕು. ಇಲ್ಲದಿದ್ದರೆ ಅರ್ಜಿಗಳನ್ನು ರಿಜೆಕ್ಟ್ ಮಾಡಿ ವಾಪಸ್ ಕಳುಹಿಸಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಎಸಿಬಿ ಎಸ್ಪಿ ಡಿ.ಎಸ್. ನೇಮಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net