

ಬೆಂಗಳೂರು: ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸಮುದಾಯದ ಶ್ವಾನಗಳಿಗೆ ಪೂರ್ಣ ಪ್ರಮಾಣದಲ್ಲಿ ಆಹಾರ ನೀಡಲು ತಯಾರಿ ನಡೆಸುತ್ತಿದ್ದು, ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 5 ಆಹಾರ ನೀಡುವ ಸ್ಥಳಗಳನ್ನು ನಿಗದಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಪಶುಸಂಗೋಪನಾ ವಿಭಾಗ) ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
ಕಳೆದ ಅ.17ರಂದು ಪಾಲಿಕೆಯು ಎಂಟೂ ವಲಯಗಳಲ್ಲಿ 8 ಸ್ಥಳಗಳಲ್ಲಿ ಪೌರಕಾರ್ಮಿಕರು ಮತ್ತು ರೆಸ್ಟೋರೆಂಟ್ ಮಾಲೀಕರ ಸಹಯೋಗದೊಂದಿಗೆ ಆಹಾರ ನೀಡುವುದನ್ನು ಆರಂಭಿಸಿದೆ. ಪ್ರಾಣಿಗಳ ನಡುವಿನ ಆಕ್ರಮಣಕಾರಿ ಸ್ವಭಾವವನ್ನು ನಿಯಂತ್ರಿಸಲು, ಆಹಾರವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸಮುದಾಯದ ಶ್ವಾನಗಳಿಗೆ ದಿನಕ್ಕೆ ಒಂದು ಹೊತ್ತಿನ ಆಹಾರ ನೀಡುವುದರಿಂದ, ಆಹಾರ ಹುಡುಕುವ ಮತ್ತು ಆಹಾರಕ್ಕಾಗಿ ಹೋರಾಡುವ ಅಗತ್ಯವನ್ನು ಕಡಿಮೆ ಮಾಡುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
1000 ಶ್ವಾನಗಳಿಗೆ ಆಹಾರ ನೀಡುವ ಗುರಿ:
ಪಾಲಿಕೆಯು ಪ್ರಾಣಿ ಪ್ರಿಯರ ಸಹಯೋಗದೊಂದಿಗೆ ಸುಮಾರು 1,000 ಶ್ವಾನಗಳಿಗೆ ಆಹಾರವನ್ನು ನೀಡುವ ಗುರಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಶ್ವಾನಗಳಿಗೆ ಆಹಾರ ನೀಡುವ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ನಿತ್ಯ 100ಕ್ಕೂ ಹೆಚ್ಚು ಶ್ವಾನಗಳಿಗೆ ಪ್ರಾಯೋಗಿಕವಾಗಿ ಆಹಾರ ನೀಡಲಾಗುತ್ತಿದೆ ಎಂದಿದ್ದಾರೆ.
ಬೆಂಗಳೂರಿನ ಎಲ್ಲ ನಾಗರಿಕರು ಪ್ರತಿದಿನ ಒಳ್ಳೆಯ ಆಹಾರವನ್ನು ಒಂದು ಬಟ್ಟಲಿನಲ್ಲಿ ತಮ್ಮ ಮನೆಯ ಮುಂದಿರುವ ನಾಯಿಗೆ ನೀಡಿ ತಮ್ಮ ಕೈಲಾದಷ್ಟು ಸಹಾನುಭೂತಿ ತೋರುವುದರಿಂದ ಎಷ್ಟೋ ಶ್ವಾನಗಳಿಗೆ ಆಹಾರ ಸಿಗುವಂತಾಗುತ್ತದೆ. ಆದ್ದರಿಂದ ಸಮುದಾಯ ಶ್ವಾನಗಳಿಗೆ ಆಹಾರ ನೀಡುವುದರ ಜತೆಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಹಾಗೂ ಲಸಿಕೆ ಹಾಕಿಸಿ ನಗರದಲ್ಲಿ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಲಯವಾರು ಆಹಾರ ವಿತರಿಸುವ ಹೋಟೆಲ್‌ಗಳು:
ದಕ್ಷಿಣ: ನಂದಿನಿ, ಎಸ್‌ಎಲ್ಎನ್ ಮಿಲಿಟರಿ ಹೋಟೆಲ್, ಕಬ್ಬನ್‌ಪೇಟೆ, ಹೊಸ ರಂಗನಾಥ್
ಪಶ್ಚಿಮ: ಇಂದಿರಾ ಕ್ಯಾಂಟೀನ್, ಗಾಯತ್ರಿನಗರ
ಬೊಮ್ಮನಹಳ್ಳಿ: ಕಬಾಬ್ ಮಹಲ್, ಕೃಷ್ಣಂ, ಎಂಪೈರ್ ಮತ್ತು ಕೆಎ್ಸಿ
ಯಲಹಂಕ: ಉಡುಪಿ ಹೋಟೆಲ್
ದಾಸರಹಳ್ಳಿ: ಎಲೈಟ್ ಹೋಟೆಲ್
ಆರ್.ಆರ್.ನಗರ: ಗಂಗಾಧರ್ ಕ್ಯಾಟರಿಂಗ್
ಮಹದೇವಪುರ: ಹೈದರಾಬಾದ್ ಬಿರಿಯಾನಿ ಹೌಸ್, ಉಡುಪಿ ಹೋಟೆಲ್