

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯತ್ವದಿಂದ ಬಿಜೆಪಿಯ ಸರಸ್ವತಿ ಧೋಂಗಡಿ ಅನರ್ಹ ಗೊಂಡಿದ್ದಾರೆ. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಶನಿವಾರ ಈ ಆದೇಶ ಮಾಡಿದ್ದಾರೆ. 2023ರ ಜೂನ್ 20ರಂದು ಏರ್ಪಡಿಸಲಾಗಿದ್ದ ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಧೋಂಗಡಿಯವರು ಭಾಗವಹಿಸದೇ ಪಕ್ಷ ಜಾರಿ ಮಾಡಿದ ವಿಪ್ ಉಲ್ಲಂಘಿಸಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಅಂದಿನ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ ಅವರು ಪ್ರಾದೇಶಿಕ ಆಯುಕ್ತರಿಗೆ ಲಿಖಿತ ದೂರು ನೀಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಪಾಲಿಕೆಯ 54ನೇ ವಾರ್ಡ್ ಸದಸ್ಯೆ ಸರಸ್ವತಿ ವಿನಾಯಕ ಧೋಂಗಡಿ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿದ್ದರು. ತನಿಖೆ ನಡೆಸಿದ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ, ಕರ್ನಾಟಕ ಸ್ಥಳಿಯ ಪ್ರಾಧಿಕಾರದ ಪಕ್ಷಾಂತರ ಕಾಯ್ದೆಯಡಿ ಪಾಲಿಕೆ ಸದಸ್ಯೆ ಸರಸ್ವತಿ ವಿನಾಯಕ ಧೋಂಗಡಿಯವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು ಸಾಬೀತಾಗಿದೆ. ತಕ್ಷಣವೇ ಅವರನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಆದೇಶಿಸಿದ್ದಾರೆ.