ಬ್ಯಾಂಕ್, ಅಂಚೆ ಕಚೇರಿ ಕಟ್ಟಡಕ್ಕೆ ಪಾಲಿಕೆ ಬೀಗ

bbmp seize
Published on

ಬೆಂಗಳೂರು: ಬಾಕಿ ಬಾಡಿಗೆ ಪಾವತಿಸದ ಕಾರಣ ನಗರದ ಎಂ.ಜಿ.ರಸ್ತೆಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ (ಪಿಯುಬಿ) ಕಟ್ಟಡದ ನೆಲ ಅಂತಸ್ತಿನಲ್ಲಿರುವ ಬ್ಯಾಂಕ್ ಆಫ್​​ ಬರೋಡಾ (ವಿಜಯಾ ಬ್ಯಾಂಕ್) ಹಾಗೂ ಅಂಚೆ ಕಚೇರಿಯ ಕಟ್ಟಡಕ್ಕೆ ಬಿಬಿಎಂಪಿ ಅಧಿಕಾರಿಗಳು ಶನಿವಾರ ಬೀಗ ಹಾಕಲಾಗಿದೆ.

ಬ್ಯಾಂಕ್ ಆಫ್​​ ಬರೋಡಾ ಶಾಖೆಯು 2011ರಿಂದ ಹಳೆಯ ಬಾಡಿಗೆಯನ್ನೇ ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆ ಪಾವತಿಸಿರಲಿಲ್ಲ. ಅಲ್ಲದೆ, 2022ರ ಡಿಸೆಂಬರ್‌ನಿಂದ ಯಾವುದೇ ಬಾಡಿಗೆಯನ್ನು ಪಾವತಿಸದೇ ಇದ್ದ ಕಾರಣ ಹಲವಾರು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಬಾಡಿಗೆ ಕಟ್ಟಿರಲಿಲ್ಲ. ಒಟ್ಟು 17.56 ಕೋಟಿ ರೂ. ಬಾಡಿಗೆ ಪಾಲಿಕೆಗೆ ಪಾವತಿಸಬೇಕಿದ್ದು, ಈ ಸಂಬಂಧ ಪೂರ್ವ ವಲಯ ಆಯುಕ್ತರ ಆದೇಶದಂತೆ ಶನಿವಾರ ಮುಂಜಾನೆಯೇ ಪಾಲಿಕೆಯ ಕಂದಾಯ ಅಧಿಕಾರಿಗಳು ಸದರಿ ಮಳಿಗೆಗೆ ಬೀಗಮುದ್ರೆ ಹಾಕಿದರು.

ಇದೇ ರೀತಿ ಅಂಚೆ ಕಚೇರಿಯ ಕಟ್ಟಡಕ್ಕೆ 2006ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿರುವುದಿಲ್ಲ. ಈ ಬಗ್ಗೆ ನೋಟಿಸ್ ಜಾರಿ ಮಾಡಿ ಪರಿಷ್ಕೃತ ಬಾಡಿಗೆ ಪಾವತಿಸುವಂತೆ ಸೂಚಿಸಿದ್ದರೂ, ಯಾವುದೇ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಹೀಗಾಗಿ ಅಂಚೆ ಕಚೇರಿಯಿಂದ 2.32 ಕೋಟಿ ರೂ. ಬಾಡಿಗೆ ಪಾವತಿಸದ ಕಾರಣ ಕಟ್ಟಡಕ್ಕೆ ಬೀಗ ಹಾಕಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net