ಪಾಲಿಕೆ ಬಡಾವಣೆ; ಮುಡಾಕ್ಕೆ ತೆರಿಗೆ

mysore
Published on

ಮೈಸೂರು: ಹಸ್ತಾಂತರಗೊಂಡ ಬಡಾವಣೆಯ ನಿವಾಸಿಗಳಿಂದ ತೆರಿಗೆ ಸಂಗ್ರಹಿಸುತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ಕೆಂಡಕಾರಿದೆ.

ಶಾಸಕ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಪಾಲಿಕೆ ವ್ಯಾಪ್ತಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆ ಇದಕ್ಕೆ ಸಾಕ್ಷಿಯಾಯಿತು.

ಹಸ್ತಾಂತರವಾದ ಮೇಲೆ ಖಾತೆ ಮಾಡಿಕೊಡುವುದು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಹೊಣೆ ಪಾಲಿಕೆ ಹೊತ್ತಿದೆ. ಆದರೆ ಹಸ್ತಾಂತರವಾದ ಮೇಲೂ ಬಡಾವಣೆಗಳ ನಿವಾಸಿಗಳಿಂದ ಮುಡಾ ತೆರಿಗೆ ಸಂಗ್ರಹ ಮಾಡುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿ ಮುಡಾಕ್ಕೆ ಸೂಚನೆ ನೀಡಿದ್ದರೂ ತೆರಿಗೆ ಸಂಗ್ರಹವನ್ನು ಮುಂದುವರಿಸಿದೆ ಎಂದು ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್ ಅಸಮಾಧಾನ ವ್ಯಕ್ತಪಡಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ, ಮುಡಾಕ್ಕೆ ಮತ್ತೊಮ್ಮೆ ಪತ್ರ ಬರೆದು ಕಂದಾಯ ಪಾವತಿಸಿಕೊಳ್ಳದೆ ಪಾಲಿಕೆಗೆ ಕಳುಹಿಸಬೇಕು ಎಂದು ಸೂಚನೆ ನೀಡಿದರು.

ಬಳಿಕ ಪಾಲಿಕೆಗೆ ಹಸ್ತಾಂತರವಾದ ಮುಡಾ ಅನುಮೋದಿತ ಬಡಾವಣೆಗಳಲ್ಲಿ ನಿವಾಸಿಗಳಿಂದ ತೆರಿಗೆ ಸಂಗ್ರಹಿಸದಂತೆ ಮುಡಾಕ್ಕೆ ಪತ್ರ ಬರೆಯಲು ಸಭೆ ನಿರ್ಧರಿಸಿತು.

ವಿಜಯನಗರ 3ನೇ ಹಂತದಲ್ಲಿ ಯುಜಿಡಿ ಸಮಸ್ಯೆ, ಉದ್ಯಾನಗಳ ಸಮರ್ಪಕ ನಿರ್ವಹಣೆ ಇಲ್ಲದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ವಾರ್ಡ್‌ವಾರು ಪಾರ್ಕ್‌ಗಳ ನಿರ್ವಹಣೆ ಕೆಲಸವನ್ನು ಅನುದಾನ ನೋಡಿ ಮಾಡಬೇಕು. ಯುಜಿಡಿ ಸಮಸ್ಯೆ ಬಗ್ಗೆ ದೂರು ಬರುತ್ತಿದ್ದಂತೆ ಬಗೆಹರಿಸಬೇಕು. ಒಳಚರಂಡಿ ನೀರು ಹರಿದರೆ ಸೊಳ್ಳೆಗಳ ಕಾಟ, ಡೆಂೆ ಜ್ವರ ಬರಲಿದೆ. ಹಿನಕಲ್‌ನಿಂದ ನನ್ನೇಶ್ವರ ಕಲ್ಯಾಣಿ ಕೆರೆಗೆ ಸೇರುವ ಮಾರ್ಗದ ಯುಜಿಡಿ ಲೈನ್ ಬದಲಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ಅಭಿವೃದ್ಧಿ ಅಧಿಕಾರಿ ಸೋಮಶೇಖರ್, ಹುಣಸೂರು ರಸ್ತೆಯ ರೂಸ್ಟ್ ಹೋಟೆಲ್‌ನಿಂದ ರಾಯಲ್ ಎನ್‌ಫೀಲ್ಡ್ ಷೋ ರೂಂ, ರುಡ್‌ಸೆಟ್‌ನಿಂದ ನನ್ನೇಶ್ವರ ಕಲ್ಯಾಣಿತನಕ ಯುಜಿಡಿ ಪ್ರತ್ಯೇಕ ಮಾರ್ಗಕ್ಕಾಗಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.


ಪಾರ್ಕ್ ನಿರ್ವಹಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ಮೋಹನ್, ವಿಜಯನಗರ 3ನೇ ಹಂತದಲ್ಲಿ 14 ಪಾರ್ಕ್‌ಗಳಿದ್ದು, 3 ಪಾರ್ಕ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. 11 ಪಾರ್ಕ್‌ಗಳ ನಿರ್ವಹಣೆಯಾಗುತ್ತಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಆಯುಕ್ತ ಷರೀಫ್, ನಗರದಲ್ಲಿ 529 ಉದ್ಯಾನಗಳಿದ್ದು, 312 ಉದ್ಯಾನಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಉಳಿದವನ್ನು ನಿರ್ವಹಣೆ ಮಾಡಲು ವಲಯವಾರು ಟೆಂಡರ್ ಕರೆಯಲಾಗುವುದು ಎಂದು ಸಭೆಗೆ ತಿಳಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ವಲಯವಾರು ಬದಲಿಗೆ ವಾರ್ಡ್‌ವಾರು ಕರೆಯಬೇಕು. ಯಾವ ವಾರ್ಡ್‌ನಲ್ಲಿ ಎಷ್ಟು ತೆರಿಗೆ ಸಂಗ್ರಹವಾಗುತ್ತಿದೆ? ನಿರ್ವಹಣೆಗೆ ಎಷ್ಟು ಖರ್ಚಾಗುತ್ತದೆ? ಎಂಬ ಅಂದಾಜು ತಯಾರಿಸಿ ಟೆಂಡರ್ ಕರೆಯುವಂತೆ ಶಾಸಕರು ಸೂಚಿಸಿದರು.


ವಿಜಯನಗರ 3ನೇ ಹಂತದ ಬಡಾವಣೆ ಪಾಲಿಕೆಗೆ ಹಸ್ತಾಂತರವಾದರೂ ಸರ್ಕಾರದಿಂದ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿಲ್ಲ. ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಂಡು ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.


ರಾಮಕೃಷ್ಣನಗರದಲ್ಲಿ ಯುಜಿಡಿ ನಿರ್ವಹಣೆ ಮಾಡದೆ ಇರುವ ಕಾರಣ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಕಾವೇರಿ ಅಪಾರ್ಟ್‌ಮೆಂಟ್‌ನಲ್ಲಿ 15 ದಿನಗಳಲ್ಲಿ 3 ದಿನ ಬ್ಲಾಕ್ ಆಗುವ ಕಾರಣದಿಂದ ಮನೆಯನ್ನೇ ಖಾಲಿ ಮಾಡುವಂತಾಗಿದೆ. ದೂರು ನೀಡಿದರೆ 3 ದಿನವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ಸಾರ್ವಜನಿಕರೊಬ್ಬರು ಶಾಸಕರ ಗಮನಕ್ಕೆ ತಂದರು.


ಇದಕ್ಕೆ ಪ್ರತಿಕ್ರಿಯಿಸಿದ ವಲಯ ಸಹಾಯಕ ಆಯುಕ್ತ ಸತ್ಯಮೂರ್ತಿ, ಈಗಾಗಲೇ ಕೆಲ ಸ್ಥಳಗಳನ್ನು ಗುರುತಿಸಿ ಟೆಂಡರ್ ಕರೆಯಲಾಗಿದೆ. ಜೆಟ್ಟಿಂಗ್, ಸಕ್ಕಿಂಗ್ ಯಂತ್ರದಿಂದ ಸ್ವಚ್ಛತೆ ಮಾಡಿಸಲಾಗುತ್ತಿದೆ ಎಂದರು.


ಈ ಹಂತದಲ್ಲಿ ಮಾತನಾಡಿದ ಆಯುಕ್ತರು, 4 ವಾರ್ಡ್‌ಗೆ ಒಂದು ಜೆಟ್ಟಿಂಗ್ ಮೆಷಿನ್ ಕೊಡಲಾಗಿದ್ದು, ಒತ್ತಡ ಬಂದಾಗ ಸಮಸ್ಯೆಯಾಗಲಿದೆ. ಆದ್ದರಿಂದ ಇಂದೋರ್ ಮಾದರಿಯಲ್ಲಿ ಸ್ವಯಂಪ್ರೇರಣೆಯಿಂದ ಮ್ಯಾನ್‌ಹೋಲ್ ಕ್ಲೀನ್ ಮಾಡುವ ಯಂತ್ರವನ್ನು ಖರೀದಿಸಲು ಚಿಂತನೆ ಮಾಡಲಾಗಿದೆ. ಈ ಯಂತ್ರದಿಂದ ದಿನಕ್ಕೆ 20 ದೂರುಗಳನ್ನು ಇತ್ಯರ್ಥ ಪಡಿಸಬಹುದಾಗಿದೆ ಎಂದು ವಿವರಿಸಿದರು.


ಆನಂದನಗರ ಬಡಾವಣೆಯು ಪಾಲಿಕೆಗೆ ಅರ್ಧ ಮತ್ತು ಮುಡಾಗೆ ಅರ್ಧಭಾಗ ಬರಲಿದೆ. ಮೂಲಸೌಕರ್ಯ ಸರಿಯಾಗಿ ಕಲ್ಪಿಸಿಲ್ಲ. ಈ ನಿವೇಶನಗಳಿಗೆ ಖಾತೆ ಮಾಡಿಕೊಡದಂತೆ ಮುಡಾಕ್ಕೆ ಪತ್ರ ಬರೆಯಲಾಗಿದ್ದರೂ ಯಾವುದೇ ಗಮನಹರಿಸಿಲ್ಲ. 200 ಮನೆಗಳು ಪಾಲಿಕೆಗೆ ಹಸ್ತಾಂತರ ಮಾಡಿದ್ದರೂ ಕಂದಾಯ ಮುಡಾಕ್ಕೆ ಪಾವತಿಯಾಗುತ್ತಿದೆ ಎಂದು ವಲಯ ಸಹಾಯಕ ಆಯುಕ್ತರು ಹೇಳಿದರು.


ಸಿಬ್ಬಂದಿ ಏಕೆ ಕೆಲಸ ಮಾಡಲ್ಲ?


ಪೌರಕಾರ್ಮಿಕರು ಬೆಳಗ್ಗೆ ಶಿಸ್ತಿನಿಂದ ಆಗಮಿಸಿ ಕೆಲಸ ಮಾಡುವಂತೆ ಪಾಲಿಕೆ ಸಿಬ್ಬಂದಿ ಏಕೆ ಕೆಲಸ ಮಾಡಲ್ಲ ಎಂದು ಜಿಟಿಡಿ ಪ್ರಶ್ನಿಸಿದರು.
ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಬರುವ ಮುನ್ನ ಬೆಳಗ್ಗೆ ವಾರ್ಡ್‌ವಾರು ಭೇಟಿ ನೀಡಬೇಕು. ವಾಕಿಂಗ್ ಮಾಡುವ ಬದಲು ವಾರ್ಡ್‌ವಾರು ಪ್ರವಾಸ ಮಾಡಿದರೆ ಸ್ಥಳೀಯ ಸಣ್ಣಪುಟ್ಟ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬಹುದು ಎಂದು ಹೇಳಿದರು.


ಕುಡಿಯುವ ನೀರು, ರಸ್ತೆ, ಒಳಚರಂಡಿ, ವಿದ್ಯುತ್ ದೀಪ, ಸ್ವಚ್ಛತೆ ಗಮನಿಸಿ. ಆಗ ಸಾರ್ವಜನಿಕರಿಂದ ಬರುವ ದೂರುಗಳು ಕಡಿಮೆ ಆಗಲಿವೆ. ಮುಡಾದಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪತ್ರ ವ್ಯವಹಾರ ಮಾಡಿ. ಬಳಿಕ ಆ ಕುರಿತು ಫಾಲೋಅಪ್ ಮಾಡಬೇಕು ಎಂದು ಸೂಚಿಸಿದರು


ಅಧೀಕ್ಷಕ ಇಂಜಿನಿಯರ್ ಕೆ.ಜೆ.ಸಿಂಧು, ವಲಯ ಸಹಾಯಕ ಆಯುಕ್ತ ಸತ್ಯಮೂರ್ತಿ, ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಕಾರ್ಯಪಾಲಕ ಇಂಜಿನಿಯರ್ ಆಸಿಫ್, ನಗರಸಭೆ ಆಯುಕ್ತ ಚಂದ್ರಶೇಖರ್, ಮುಖ್ಯಾಧಿಕಾರಿಗಳಾದ ದೀಪಾ, ಸುರೇಶ್, ರವಿಕೀರ್ತಿ, ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net