

ಬೆಳಗಾವಿ: ನಗರದಲ್ಲಿ ಹಲವು ದಿನಗಳಿಂದ ವಿವಾದದ ಕೇಂದ್ರವಾಗಿದ್ದ ಶಹಾಪುರ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೇ ಪಿಬಿ ರಸ್ತೆವರೆಗಿನ ರಸ್ತೆಯ ಭೂಸ್ವಾಧೀನ ಪ್ರಕರಣ ಸದ್ಯ ಸುಖಾಂತ್ಯ ಕಂಡಿದೆ.
ಧಾರವಾಡ ಹೈಕೋರ್ಟ್ ನಿರ್ದೇಶನದಂತೆ ಶನಿವಾರ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಎಸ್.ಎಸ್. ಬಳ್ಳಾರಿ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ ಭೂಸ್ವಾಧೀನದ ದಾಖಲೆಗಳನ್ನು ಭೂ ಮಾಲೀಕರಿಗೆ ಹಸ್ತಾಂತರಿಸಿದರು. ಹಸ್ತಾಂತರಗೊಂಡ ಜಾಗೆದ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಿರುವ ಅಧಿಕಾರಿಗಳು ‘ಭೂಮಿಯನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿದೆ’ ಎಂಬ ಫಲಕ ಅಳವಡಿಸಿದ್ದಾರೆ.
ಪರಿಹಾರ ಕೊಡದೆ ಖಾಸಗಿ ಜಮೀನಿನಲ್ಲಿ ಸ್ಮಾರ್ಟ್ ಸಿಟಿಯಿಂದ ರಸ್ತೆ ನಿರ್ಮಿಸಲಾಗಿತ್ತು. ಇದನ್ನು ವಿರೋಧಿಸಿದ್ದ ಭೂ ಮಾಲೀಕ ಕೋರ್ಟ್ ಮೆಟ್ಟಿಲೇರಿದ್ದ. ಪ್ರಕರಣದ ವಿಚಾರಣೆ ನಡೆಸಿದ್ದ ಧಾರವಾಡ ಹೈಕೋರ್ಟ್, ‘ಮಾಲೀಕರ ಒಪ್ಪಿಗೆಯಿಲ್ಲದೆ ವಶಪಡಿಸಿಕೊಂಡ ಭೂಮಿಯನ್ನು ಗೌರವದಿಂದ ಮಾಲೀಕರಿಗೆ ಸೆ.23ರ ಒಳಗಾಗಿ ಮರಳಿಸಿ’ ಎಂದು ನಿರ್ದೇಶನ ನೀಡಿತ್ತು. ಇದಕ್ಕೂ ಮೊದಲು ವಿಚಾರಣೆಯಲ್ಲಿ ಭೂ ಮಾಲೀಕರಿಗೆ ಪರಿಹಾರ ಪಾವತಿಸಲು 20 ಕೋಟಿ ರೂ.ಠೇವಣಿ ಇಡುವಂತೆ ಮಹಾನಗರ ಪಾಲಿಕೆಗೆ ನ್ಯಾಯಾಲಯ ಸೂಚಿಸಿತ್ತು.
ಸಂಚಾರ ಸಮಸ್ಯೆ ಆರಂಭ: ಶಹಾಪುರ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೇ ಪಿಬಿ ರಸ್ತೆವರೆಗಿನ ರಸ್ತೆಯಲ್ಲಿ ಶನಿವಾರ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿರುವುದರಿಂದ ಕಪಿಲೇಶ್ವರ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಬೆಳಗಾವಿ ನಗರದ ಉತ್ತರ ಭಾಗವನ್ನು ದಕ್ಷಿಣ ಭಾಗಕ್ಕೆ ಸಂಪರ್ಕಿಸುವ ಸರಳ ರಸ್ತೆ ಬಂದ್ ಆಗಿರುವುದರಿಂದ 200 ಮೀಟರ್ ಹೋಗಲು 2 ರಿಂದ 3 ಕಿಮೀ ಸುತ್ತುವರಿಯುವ ಪರಿಸ್ಥಿತಿ ಎದುರಿಸುವಂತಾಗಿದೆ. ಸಂಚಾರ ಸ್ಥಗಿತಗೊಂಡಿರುವುದರಿಂದ ಈ ಮಾರ್ಗದಲ್ಲಿರುವ ವ್ಯಾಪಾರಸ್ಥರು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಶೀಘ್ರ ರಸ್ತೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.