

ಬೆಂಗಳೂರು: ಬಿಬಿಎಂಪಿಯಲ್ಲಿ ವಿವಿಧ ಕಾಮಗಾರಿ ಕೈಗೊಂಡಿದ್ದ ಗುತ್ತಿಗೆದಾರರಿಗೆ ಬಾಕಿ ಬಿಲ್ ಮೊತ್ತವನ್ನು ಪಾವತಿಸುವ ಸಂಬಂಧ ಪಾಲಿಕೆಯ ಹಣಕಾಸು ವಿಭಾಗದ ಹೆಚ್ಚುವರಿ ಆಯುಕ್ತರು ಕೆನರಾ ಬ್ಯಾಂಕ್‌ಗೆ ಪತ್ರ ಬರೆದು ಕೋರಿದ್ದಾರೆ.
ರಾಜ್ಯ ಸರ್ಕಾರದ ನಗರೋತ್ಥಾನ ಅನುದಾನದಲ್ಲಿ ಈ ಹಿಂದೆಯೇ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಇದರ ಬಿಲ್‌ನ ಶೇ.25 ಮೊತ್ತವನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. ಇತ್ತೀಚಿಗೆ ಸರ್ಕಾರ 439.41 ಕೋಟಿ ರೂ. ಬಿಲ್ ಬಿಡುಗಡೆ ಮಾಡಿದ್ದು, ಈ ಹಣವನ್ನು ಪಾಲಿಕೆಯ ಎಂಟೂ ವಲಯಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಿಲ್ ಪಾವತಿಗೆ ಬಳಸಿಕೊಳ್ಳಲಾಗುತ್ತಿದೆ. ಹೆಚ್ಚುವರಿ ಆಯುಕ್ತರು ಆಯಾ ವಲಯಗಳ ಮುಖ್ಯ ಅಭಿಯಂತರರ ಖಾತೆಗೆ ಹಣ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ. ಇದರನ್ವಯ ಕೈಗೊಂಡ ಕಾಮಗಾರಿಗಳಿಗೆ ಈ ಮೊತ್ತವು ವಿವಿಧ ಗುತ್ತಿಗೆದಾರರಿಗೆ ಬ್ಯಾಂಕ್ ಮೂಲಕ ಬಿಲ್ ಮೊತ್ತ ಪಾವತಿಯಾಗಲಿದೆ.