

ಕಲಬುರಗಿ: ನಗರದ ಇಂದಿರಾ ಭವನದಲ್ಲಿ ಶುಕ್ರವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನಧಿಕೃತವಾಗಿ ಪ್ರವೇಶಿಸಿ, ಗಲಾಟೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಲು ಬಿಜೆಪಿ ಸದಸ್ಯರು ಮುಂದಾಗಿದ್ದಾರೆ.
ಸಭೆಯಲ್ಲಿ ಕೆಲ ಮಹಿಳಾ ಸದಸ್ಯೆಯರ ಪತಿಯಂದಿರು ಅನಧಿಕೃತವಾಗಿ ಆಗಮಿಸಿದ್ದು, ಚರ್ಚೆ ವೇಳೆ ಆಡಳಿತ ಪಕ್ಷ ನಾಯಕ ಕೃಷ್ಣಾ ನಾಯಕ್ ಅವರ ಜಾತಿ ನಿಂದನೆ ಮಾಡಿದ್ದಲ್ಲದೇ ಸರ್ಕಾರಿ ಉಪಕರಣಗಳನ್ನು ಒಡೆದು ಹಾಕಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಬ್ರಹ್ಮಪುರ ಪೊಲೀಸ್ ಠಾಣೆಗೆ ದೂರು ನೀಡಲು ಶನಿವಾರ ಬಿಜೆಪಿ ಸದಸ್ಯರು ಮುಂದಾಗಿದ್ದಾರೆ.
ಸಾಮಾನ್ಯ ಸಭೆ ಜನಪ್ರತಿನಿಧಿಗಳ ಸಭೆಯಾಗಿದ್ದು, ಅಲ್ಲಿ ಪೊಲೀಸರ ನೇರ ಹಸ್ತಕ್ಷೇಪ, ಪ್ರಕರಣ ದಾಖಲು ಸೇರಿದಂತೆ ಇತರ ನಿಯಮಗಳು ಇರುವ ಸಾಧ್ಯತೆ ಇದೆ. ಮಾಹಿತಿ ಪಡೆದು ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಪಾಲಿಕೆ ಮೇಯರ್ ವಿಶಾಲ ದರ್ಗಿ ಸಂಧಾನಕ್ಕೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ತಡ ರಾತ್ರಿವರೆಗೂ ಬ್ರಹ್ಮಪುರ ಪೊಲೀಸ್ ಠಾಣೆ ಎದುರು ಬಿಜೆಪಿ ಸದಸ್ಯರು, ಮುಖಂಡರು ಪೊಲೀಸರೊಂದಿಗೆ ಈ ಕುರಿತು ಚರ್ಚೆ ನಡೆಸುತ್ತಲೇ ಇದ್ದರು.
ಆಡಳಿತ ಪಕ್ಷದ ನಾಯಕ ಕೃಷ್ಣಾ ನಾಯಕ, ಸಚಿನ ಕಡಗಂಚಿ, ವೀರಣ್ಣ ಹೊನ್ನಳ್ಳಿ, ಶಂಭು ಬಳಬಟ್ಟಿ, ಪ್ರಭು ಹಾದಿಮನಿ, ರಾಜು ದೇವದುರ್ಗ, ಬಸವರಾಜ ಬಿರಾಳ, ಜಗದೇವ ಗುತ್ತೇದಾರ್, ಸುನೀಲ್ ಬನಶೆಟ್ಟಿ ಸೇರಿದಂತೆ ಬಿಜೆಪಿ ಮುಖಂಡರು ದೂರು ಕೊಡಲು ಆಗಮಿಸಿದ್ದರು.