ಹೂಳೆತ್ತುವಲ್ಲಿ ಪಾಲಿಕೆ ವೈಫಲ್ಯ, ಕಾಮಗಾರಿ ಅರ್ಧಕ್ಕೆ ಸ್ಥಗಿತ

roadside silt
Published on

ಬೆಂಗಳೂರು: ರಾಜಧಾನಿಯಲ್ಲಿ ಮಳೆಗಾಲದ ವೇಳೆ ಸಂಭವಿಸುವ ಅನಾಹುತಗಳನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದಿದ್ದ ಬಿಬಿಎಂಪಿ, ಮುಂಗಾರು ಆರಂಭಗೊಂಡು 3 ವಾರಗಳೇ ಕಳೆದರೂ ಹೂಳೆತ್ತುವಿಕೆ ಕಾಮಗಾರಿ ಪೂರ್ಣಗೊಳಿಸದೆ ವೈಫಲ್ಯ ಕಂಡಿದೆ.

ಮಳೆಗಾಲಕ್ಕೂ ಮುನ್ನ ರಾಜಕಾಲುವೆ ಸೇರಿ ನೀರುಗಾಲುವೆ, ಚರಂಡಿ ಹಾಗೂ ಸೈಡ್ ಡ್ರೈನ್‌ಗಳಲ್ಲಿ ಕಸ-ಕಡ್ಡಿ ಸಹಿತ ಹೂಳೆತ್ತುವ ಕೆಲಸ ಕೈಗೊಳ್ಳಲಾಗುತ್ತದೆ. ಇದನ್ನು ಆಯಾ ವಲಯ ಮಟ್ಟದಲ್ಲೇ ಸ್ಥಳೀಯ ಇಂಜಿನಿಯರ್‌ಗಳ ನಿಗಾದಲ್ಲಿ ನಡೆಸಲಾಗುತ್ತದೆ. ಈ ಬಾರಿ ಮೇ 13ರಂದು ಪಾಲಿಕೆ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಎಲ್ಲ ವಲಯಗಳ ಮುಖ್ಯಸ್ಥರು ಹಾಗೂ ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ವಿಭಾಗಗಳ ಪ್ರಮುಖರ ಸಭೆ ನಡೆಸಿದ್ದರು. ಆ ಸಂದರ್ಭದಲ್ಲಿ ಮೇ ತಿಂಗಳಾಂತ್ಯಕ್ಕೆ ಎಲ್ಲೆಡೆ ಹೂಳೆತ್ತುವಿಕೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಗಡುವು ವಿಧಿಸಲಾಗಿತ್ತು. ಈಗ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಈವರೆಗೂ ಅರ್ಧದಷ್ಟು ಕಾಮಗಾರಿ ಆಗದೆ ಸಮಸ್ಯೆ ಹಾಗೆಯೇ ಉಳಿದಿರುವುದು ಮಳೆ ಅನಾಹುತಕ್ಕೆ ಆಸ್ಪದ ನೀಡಿದಂತಾಗಿದೆ.

ವಿಪತ್ತು ನಿರ್ವಹಣೆ ಕಾರ್ಯದಲ್ಲಿ ಆರಂಭದಲ್ಲಿ ಆಯಾ ವಲಯಗಳಲ್ಲಿ ವಿವಿಧ ಕೆಲಸಗಳಿಗೆ ಚಾಲನೆ ದೊರೆತಿತ್ತು. ನಂತರದಲ್ಲಿ ಅದೇ ವೇಗದಲ್ಲಿ ಕಾಮಗಾರಿ ಮುಂದುವರಿಸಲು ಪಾಲಿಕೆಗೆ ಸಾಧ್ಯವಾಗಿಲ್ಲ. ಅನುದಾನ ಲಭ್ಯತೆ ಹಾಗೂ ಕಾರ್ಮಿಕರ ಕೊರತೆಯಿಂದಾಗಿ ಸಮಸ್ಯೆ ಮತ್ತಷ್ಟು ಹಿಗ್ಗಿದೆ. ಪ್ರಮುಖ ಜಂಕ್ಷನ್, ಆರ್ಟೀರಿಯಲ್ ರಸ್ತೆಗಳ ಬದಿಯಿರುವ ಚರಂಡಿಗಳನ್ನು ಸ್ವಚ್ಚಗೊಳಿಸಿದ್ದರೂ, ಬಡಾವಣೆಗಳ ಒಳಭಾಗದಲ್ಲಿ ಹೂಳೆತ್ತುವ ಕೆಲಸವೇ ಆಗಿಲ್ಲ.

ವರ್ತುಲ ರಸ್ತೆಯ ಬಿಇಎಲ್ ವೃತ್ತ-ಭದ್ರಪ್ಪ ಲೇಔಟ್ ಜಂಕ್ಷನ್ ನಡುವಿನ ಮಾರ್ಗದಲ್ಲಿ ಎರಡೂ ಬದಿಯ ಚರಂಡಿಗಳಲ್ಲಿ ಹೂಳೆತ್ತದ ಕಾರಣ ಮಳೆನೀರು ಸಂಗ್ರಹಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಹೆಣ್ಣೂರು ಜೀವವೈವಿಧ್ಯ ಉದ್ಯಾನ ಬಳಿಯೂ ಇಂಥದ್ದೇ ಸಮಸ್ಯೆ ಇದೆ. ಯಲಹಂಕ ವಲಯದ ಕೋಗಿಲು-ಕಣ್ಣೂರು ಅಂಡರ್‌ಪಾಸ್‌ನಲ್ಲಿ ಮಣ್ಣು ತೆಗೆದು ರಾಶಿ ಹಾಕಿ 15 ದಿನಗಳು ಕಳೆದಿದ್ದರೂ, ಇನ್ನೂ ಹಾಗೆಯೇ ಇದೆ. ಕೆಲವೆಡೆ ಹೂಳನ್ನು ಹೊರಸಾಗಿಸದ ಕಾರಣ ಮಳೆನೀರಿನ ಮೂಲಕ ಮತ್ತೆ ಚರಂಡಿ ಸೇರುವಂತಾಗಿದೆ. ಈ ಸಮಸ್ಯೆ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಕಾಣಬಹುದಾಗಿದ್ದರೂ, ಅಧಿಕಾರಿ ವರ್ಗ ಎಚ್ಚೆತ್ತಿಲ್ಲ.

ಅಗಾಧ ಕಾರ್ಯಕ್ಕೆ ಅತ್ಯಲ್ಪ ಹಣ:

ಈ ಬಾರಿ 225 ವಾರ್ಡ್‌ಗಳಲ್ಲಿನ ಸೈಡ್ ಡ್ರೈನ್‌ಗಳಲ್ಲಿ ಹೂಳೆತ್ತಲು ತಲಾ 30 ಲಕ್ಷ ರೂ. ಹಣ ಮೀಸಲಿಡಲಾಗಿದೆ. ಅತ್ಯಲ್ಪ ಅನುದಾನ ನಿಗದಿ ಮಾಡಿರುವುದರಿಂದ ಹೆಚ್ಚಿನ ಕಡೆ ಹೂಳೆತ್ತಲು ಹಣದ ಕೊರತೆ ಎದುರಾಗಿದೆ. ಹೆಚ್ಚುವರಿ ಹಣ ಬಿಡುಗಡೆಯಾಗದ ಕಾರಣ ಬಾಕಿ ಕೆಲಸವನ್ನು ಕೈಗೆತ್ತಿಕೊಂಡಿಲ್ಲ. ದೊಡ್ಡ ವಾರ್ಡ್‌ಗಳಲ್ಲಿ ಶೇ.25 ಪ್ರಮಾಣದ ಕೆಲಸವೇ ಆಗಿಲ್ಲ. ಕಳೆದೆರಡು ವರ್ಷಗಳಿಂದ ಹೂಳೆತ್ತದ ಕಾರಣ ಹಲವೆಡೆ ಚರಂಡಿಗಳಲ್ಲಿ ಅಗಾಧ ತ್ಯಾಜ್ಯಮಣ್ಣ ಸಂಗ್ರಹಗೊಂಡಿದೆ. ಇದನ್ನು ತೆರವು ಮಾಡಿ ಕ್ವಾರಿಗಳಿಗೆ ಸಾಗಿಸಲು ಅಧಿಕಾರಿ ವರ್ಗ ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ವಿಪತ್ತು ನಿರ್ವಹಣೆಗೆ 10 ಕೋಟಿ ನಿಗದಿ:

ಮಳೆಗಾಲದಲ್ಲಿ ಪ್ರವಾಹ ಸೇರಿ ಅವಘಡ ಸಂಭವಿಸಿದ್ದಲ್ಲಿ ತುರ್ತು ಪರಿಹಾರ ಕೈಗೊಳ್ಳಲು ವಿಪತ್ತು ನಿರ್ವಹಣೆ ಹೆಸರಿನಲ್ಲಿ 10 ಕೋಟಿ ರೂ. ಮೀಸಲಿಡಲಾಗಿದೆ. ಪಾಲಿಕೆ ಬಜೆಟ್‌ನಲ್ಲಿ ನಿಗದಿ ಮಾಡಿರುವ ಈ ಅನುದಾನ ಅತ್ಯಲ್ಪವಾಗಿದ್ದು, ಅಕ್ಟೋಬರ್‌ವರೆಗೂ ಮುಂಗಾರು ಇರುವುದರಿಂದ ವಿವಿಧ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ಅಗತ್ಯವಿದೆ. ಹಣ ಲಭ್ಯತೆ ಆಧರಿಸಿ ಕಾಮಗಾರಿ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಮಳೆಗಾಲ ಶುರುವಾದ ಬಳಿಕ ಇಲ್ಲಿನ ಚರಂಡಿಗಳಲ್ಲಿ ಹೂಳೆತ್ತುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಊರಿನ ಒಳಭಾಗದಲ್ಲಿ ಹೂಳೆತ್ತಿ 7 ವರ್ಷವಾಗಿದ್ದು, ಇನ್ನೂ ಆ ಕೆಲಸ ಪೂರ್ಣಗೊಂಡಿಲ್ಲ. ಏರ್‌ಪೋರ್ಟ್ ರಸ್ತೆಯ ಸರ್ವಿಸ್ ರಸ್ತೆ ಬದಿಯ ಚರಂಡಿ ಸಮಸ್ಯೆಯನ್ನು ಪಾಲಿಕೆ ಕಮಿಷನರ್ ವೀಕ್ಷಿಸಿ ಹೋದ ನಂತರವೂ ಪರಿಹರಿಸಿಲ್ಲ.

- ರಾಕೇಶ್, ಬ್ಯಾಟರಾಯನಪುರ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net