

ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ ಕೇರಳದ ವಯನಾಡ್‌ನಲ್ಲಿ ಮಳೆ ಪ್ರವಾಹ, ಭೂಕುಸಿತದಿಂದ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ನೆರವು ಮತ್ತು ದಿನಸಿ ಸಾಮಾಗ್ರಿಗಳನ್ನು ತಲುಪಿಸುವ 2 ಟ್ರಕ್‌ಗಳಿಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಶುಕ್ರವಾರ ಚಾಲನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದ ವಯಾನಾಡ್‌ನಲ್ಲಿ ಆಗಿರುವ ದುರಂತದಿಂದ ಸಾಕಷ್ಟು ನಷ್ಟವುಂಟಾಗಿದೆ. ಆ ಸಮಸ್ಯೆಗೆ ಎಲ್ಲ ಕಡೆಯಿಂದ ಸ್ಪಂದಿಸಿ ನೆರವು ನೀಡಲಾಗುತ್ತಿದೆ. ಜನರಿಗೆ ಸಮಸ್ಯೆ ಮತ್ತು ಸಂಕಷ್ಟ ಎದುರಾದಾಗ ನೌಕರರ ಸಂಘವು ಸಹಾಯ, ಸಹಕಾರ ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಸಂತ್ರಸ್ತರಿಗೆ ಪಾಲಿಕೆ ನೌಕರರ ಸಂಘವು 25 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ ಎಂದರು.
ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ವಯನಾಡ್‌ನಲ್ಲಿ ಮಳೆ ಪ್ರವಾಹ ದುರಂತದಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಸರ್ಕಾರದೊಂದಿಗೆ ಸಂಘ-ಸಂಸ್ಥೆಗಳು, ಸಾರ್ವಜನಿಕರು ಸಹಕಾರ ನೀಡಿದಾಗ ಸಂಕಷ್ಟಗಳಿಗೆ ಸುಲಭ ಪರಿಹಾರ ನೀಡಬಹುದಾಗಿದೆ. ನೌಕರರ ಸಂಘವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು, ಪಾಲಿಕೆಯ ಅಧಿಕಾರಿ/ನೌಕರರಿಂದ ಆರ್ಥಿಕ ನೆರವಿನಿಂದ ದಿನಸಿ ಸಾಮಗ್ರಿಗಳು ಹಾಗೂ ದಿನಬಳಕೆಯ ವಸ್ತುಗಳು ಸೇರಿ ಸುಮಾರು 11 ಟನ್ ಸಾಮಗ್ರಿಗಳನ್ನು ನೀಡಲಿದ್ದೇವೆ. ಸಾಮಗ್ರಿಗಳನ್ನು ಹೊತ್ತು ಸಾಗುವ ವಾಹನದ ಜತೆಗೆ 20ಕ್ಕೂ ಹೆಚ್ಚು ಅಧಿಕಾರಿ/ನೌಕರರು ವಯನಾಡ್‌ಗೆ ತೆರಳಿ ಸಂತ್ರಸ್ತರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.