ಪಾಲಿಕೆಗೆ ಚುನಾವಣೆ ಸನ್ನಿಹಿತ

Tumakuru Mahangara Palike Tumakuru city Corporation
TUMKUR-PALIKE
ತುಮಕೂರು ಮಹಾನಗರ ಪಾಲಿಕೆ
Published on

ವಾರ್ಡ್​ವಾರು ಮತದಾರರ ಪಟ್ಟಿ ತಯಾರಿಸಲು ಡಿಸಿಗೆ ಚುನಾವಣಾ ಆಯೋಗ ಸೂಚನೆ



ತುಮಕೂರು: ಅವಧಿ ಮುಕ್ತಾಯವಾಗಿರುವ ತುಮಕೂರು ಮಹಾನಗರ ಪಾಲಿಕೆಗೆ ಚುನಾವಣೆ ಸನ್ನಿಹಿತವಾಗಿದ್ದು, ರಾಜ್ಯ ಚುನಾವಣಾ ಆಯೋಗ ಪ್ರಕ್ರಿಯೆ ಆರಂಭಿಸಿದೆ. ವಾರ್ಡ್​ವಾರು ಮತದಾರರ ಪಟ್ಟಿ ತಯಾರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಆ.19ರಂದು ವಾರ್ಡ್​ಗಳ ವಿಂಗಡಣೆ ಅಧಿಸೂಚನೆ ಹೊರಡಿಸಲಿದ್ದು, ವಾರ್ಡ್​ ವ್ಯಾಪ್ತಿಯಲ್ಲಿ ಬರುವ ಮತದಾರರನ್ನು ಆ.19ರಿಂದ 24ರ ವರೆಗೂ ಗುರತಿಸಲಿದ್ದಾರೆ. ಆ.25ರಿಂದ 31ರ ವರೆಗೆ ಮೆಟ್ರಿಕ್ಸ್​ ತಯಾರಿಸಿ ಮುದ್ರಕರಿಗೆ ನೀಡಲಿದ್ದಾರೆ. ಸೆ.1ರಿಂದ 4ರ ವರೆಗೆ ಪ್ರಥಮ ಚೆಕ್​ಲಿಸ್ಟ್​ ಮುದ್ರಣವಾಗಲಿದೆ.
ಸೆ.5ರಿಂದ 10ರ ವರೆಗೆ ಚೆಕ್​ಲಿಸ್ಟ್​ ಪಡೆದುಕೊಂಡು ವಾರ್ಡ್​ವಾರು ಮತ್ತೊಮ್ಮೆ ಪರಿಶೀಲಿಸಿ ಮತದಾರರ ಪಟ್ಟಿಯಲ್ಲಿ ಆಗಬೇಕಾಗಿರುವ ಬದಲಾವಣೆಗಳನ್ನು ಮಾಡಬಹುದು. ಸೆ.17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಆಕ್ಷೇಪಣೆ ಸಲ್ಲಿಸಲು ಸೆ.24ರ ವರೆಗೂ ಅವಕಾಶವಿರಲಿದೆ. ಸೆ.30ರಂದು ಆಕ್ಷೇಪಣೆಗಳ ಇತ್ಯರ್ಥ ನಡೆಯಲಿದೆ. ಮತ್ತೊಮ್ಮೆ ಪರಿಶೀಲಿಸಿ ಅ.9ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆಯಾಗಲಿದ್ದು, ಆ ನಂತರ ಯಾವುದೇ ಸಂದರ್ಭದಲ್ಲಿ ವಾರ್ಡ್​ವಾರು ಮೀಸಲಾತಿ ಘೋಷಿಸಿ, ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ. ಎಲ್ಲವೂ ನಿರೀಸಿದಂತೆ ನಡೆದರೆ ನವೆಂಬರ್​ ಅಥವಾ ಡಿಸೆಂಬರ್​ನಲ್ಲಿ ತುಮಕೂರು ಮಹಾನಗರ ಪಾಲಿಕೆ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಬಹುದಾಗಿದೆ.


ವಾರ್ಡ್​ ಬದಲಾಗದೆ ಮೀಸಲಾತಿ ಬದಲಾಗದು?
ತುಮಕೂರು ಮಹಾನಗರ ಪಾಲಿಕೆಯಲ್ಲಿ 35 ವಾರ್ಡ್​ಗಳಿದ್ದು, ಅಷ್ಟೇ ವಾರ್ಡ್​ಗಳನ್ನು ಉಳಿಸಿಕೊಳ್ಳಲಾಗಿದೆ. ವಾರ್ಡ್​ ಮರುವಿಂಗಡೆಯಾಗದಿರುವ ಹಿನ್ನೆಲೆಯಲ್ಲಿ ಮೀಸಲಾತಿ ಕೂಡಲೇ ಕಳೆದ ಚುನಾವಣೆಯಲ್ಲಿದ್ದಂತೆ ಮುಂದುವರಿಯಲಿದೆ. ಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರ ಎರಡು ಅವಧಿಗೆ ಅದೇ ಮೀಸಲಾತಿ ಮುಂದುವರಿಯಬೇಕಿದ್ದು, ಈ ಚುನಾವಣೆಯಲ್ಲಿಯೂ ಟಿಕೆಟ್​ ಪಡೆಯಲು ಮೂರು ಪಕ್ಷದಲ್ಲಿಯೇ ಪೈಪೋಟಿ ಇದೆ.ಈಗಾಗಲೇ ಮಾಜಿ ಸದಸ್ಯರು ಟಿಕೆಟ್​ಗಾಗಿ ವರಿಷ್ಠರ ಮನೆ ಬಾಗಿಲಿಗೆ ಎಡತಾಕುವುದನ್ನು ಆರಂಭಿಸಿದ್ದು, ಮುಂದಿನ ಮೂರು, ನಾಲ್ಕು ತಿಂಗಳು ನಗರದಲ್ಲಿ ಚುನಾವಣಾ ರಂಗು ಇರಲಿದೆ.


ಮೂರು ಪಕ್ಷಗಳಿಗೂ ಪ್ರತಿಷ್ಠೆ
ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್​ಗಳಲ್ಲಿ ಚುನಾವಣೆ ಗೆಲುವು ಬಿಜೆಪಿ, ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿದ್ದು, ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಹರಸಾಹಸ ಪಡಲಿವೆ. ಕಾಂಗ್ರೆಸ್​ ರಾಜ್ಯದಲ್ಲಿ ಆಡಳಿತದಲ್ಲಿದ್ದು, ಮಹಾನಗರ ಪಾಲಿಕೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುಬೇಕಿದೆ. ಬಿಜೆಪಿ ಸ್ಥಳಿಯ ಶಾಸಕರು, ಸಂಸದರನ್ನು ಹೊಂದಿದ್ದು, ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಹೋರಾಡಲಿದೆ. ಇನ್ನು ತುಮಕೂರು ನಗರದಲ್ಲಿ ಪ್ರಭಲವಾಗಿಯೇ ಇರುವ ಜೆಡಿಎಸ್​ ಕೂಡ ಹೆಚ್ಚು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಪಕ್ಷದ ಅಸ್ಥಿತ್ವ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಟ ಗೆಲುವು ಪಡೆದಿದ್ದು, ಅದೇ ಮೈತ್ರಿಯನ್ನು ಪಾಲಿಕೆ ಚುನಾವಣೆಯಲ್ಲಿ ಮುಂದುವರಿಸುವ ಸಾಧ್ಯವಿದೆ.


20 ರಿಂದ ಪರಿಷ್ಕರಣೆ
ತುಮಕೂರು: ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ&2025ಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿ ಪ್ರಕಟಿಸಿದ್ದು, ಆ.20ರಿಂದ ಅ.18ರ ವರೆಗೆ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಪರಿಶೀಲನಾ ವೇಳೆಯಲ್ಲಿ ಮತಗಟ್ಟೆ ವ್ಯಾಪ್ತಿಯಲ್ಲಿ ಮರಣ ಹೊಂದಿದ 18 ವರ್ಷ ತುಂಬಿದ, ಸ್ಥಳಾಂತರಗೊಂಡ ಮತದಾರರ ಬಗ್ಗೆ ಹಾಗೂ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಇದ್ದಲ್ಲಿ ನಿಗದಿತ ನಮೂನೆಯಲ್ಲಿ ಮಾಹಿತಿ ಪಡೆಯಲಿದ್ದಾರೆ. ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಮನೆಯ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ನಮೂದಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ&2025ಕ್ಕೆ ಸಂಬಂಧಿಸಿದಂತೆ ಅಕ್ಟೋಬರ್​ 29ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ 6, ಅನಿವಾಸಿ ಭಾರತೀಯರ ಹೆಸರು ಸೇರ್ಪಡೆಗೆ ನಮೂನೆ 6ಎ, ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಉದ್ದೇಶಿತ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ, ಹೆಸರು ತೆಗೆದು ಹಾಕಲು ನಮೂನೆ 7, ಮತದಾರರ ನಿವಾಸ ಬದಲಾವಣೆ ಅಥವಾ ಪ್ರಸ್ತುತ ಮತದಾರರ ಪಟ್ಟಿಯಲ್ಲಿನ ನಮೂದುಗಳ ತಿದ್ದುಪಡಿ ಅಥವಾ ಯಾವುದೇ ತಿದ್ದುಪಡಿಗಳಿಲ್ಲದೆ ಬದಲಿ ಎಪಿಕ್​ ಪಡೆಯುವಿಕೆ ಅಥವಾ ವಿಕಲಚೇತನ ವ್ಯಕ್ತಿ ಗುರುತಿಸಲು ಮನವಿಗಾಗಿ ನಮೂನೆ 8 ಅನ್ನು ಭರ್ತಿ ಮಾಡಿ ಅಕ್ಟೋಬರ್​ 29ರಿಂದ ನ.28ರೊಳಗೆ ಸಲ್ಲಿಸಬಹುದು. ಸ್ವೀಕೃತ ಹಕ್ಕು ಮತ್ತು ಆಕ್ಷೇಪಣೆ ಡಿ.24ರೊಳಗಾಗಿ ವಿಲೇವಾರಿ ಮಾಡಲಾಗುವುದು. ಅಂತಿಮ ಮತದಾರರ ಪಟ್ಟಿ 2025ರ ಜ.6ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net