ಧೀಮಂತ ಸನ್ಮಾನ ಸ್ವೀಕರಿಸಿದ ಸಾಧಕರು,  ಆಚರಣೆಯಲ್ಲಿ ಮಹಾನಗರ ಮುಂಚೂಣಿ,  ಸ್ಮರಣೀಯವಾದ ಕನ್ನಡ ರಾಜ್ಯೋತ್ಸವ

IMG-20241112-WA0015.jpg
Published on

ಹುಬ್ಬಳ್ಳಿ: ಕನ್ನಡಿಗರ ಹಬ್ಬ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಧೀಮಂತ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ 93 ಸಾಧಕರನ್ನು ಗೌರವಿಸುವ ಮೂಲಕ ಸ್ಮರಣೀಯಗೊಳಿಸಲಾಯಿತು.

ಕೆಂಪು-ಹಳದಿ ಧ್ವಜ, ಬಣ್ಣದ ಶಾಲು, ಪೇಟಾಗಳಿಂದ ಸಂಪೂರ್ಣ ಕನ್ನಡಮಯ ವಾತಾವರಣದಲ್ಲಿ ಇಲ್ಲಿಯ ಇಂದಿರಾ ಗಾಜಿನಮನೆಯಲ್ಲಿ ಆಯೋಜಿಸಿದ್ದ ಅದ್ದೂರಿ ಸಮಾರಂಭದಲ್ಲಿ ವೈದ್ಯಕಿಯ, ಕೈಗಾರಿಕೆ, ಕ್ರೀಡೆ, ಸಂಶೋಧನೆ, ಪತ್ರಿಕೋದ್ಯಮ, ಸಾಹಿತ್ಯ, ಕೃಷಿ, ರಂಗಕಲೆ, ಜಾನಪದ ಹೀಗೆ ಸುಮಾರು 20 ಕ್ಷೇತ್ರದಲ್ಲಿ ಸಾಧನೆ ಮಾಡಿ ಮಹಾನಗರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದವರನ್ನು ಗುರುತಿಸಿ ಧೀಮಂತ ಸನ್ಮಾನ ನೀಡಲಾಯಿತು.

ವಿಜಯವಾಣಿ ಹಿರಿಯ ವರದಿಗಾರ ಆನಂದಕುಮಾರ ಅಂಗಡಿ, ವಿಶೇಷ ಸಾಧನೆಗಾಗಿ ರುಶಾಲಿ ದೋಷಿ, ಯಶ್ವಿ ಭಂಡಾರಿ ಹಾಗೂ ಇತರರು ಧೀಮಂತ ಸನ್ಮಾನ ಸ್ವೀಕರಿಸಿದರು.

ಕನ್ನಡ ಉಳಿದಿದ್ದೇ ಉಕದಲ್ಲಿ:
ಅತಿಥಿಗಳಾಗಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ರಾಜ್ಯದಲ್ಲಿ ಕನ್ನಡ ಉಳಿದಿರುವುದು ಕೇವಲ ಉತ್ತರ ಕರ್ನಾಟಕ ಭಾಗದಲ್ಲಿ. ಇಲ್ಲಿನ ಜನರು ಜವಾರಿ ಕನ್ನಡ ಮಾತನಾಡುತ್ತಾರೆ. ಎಲ್ಲಿಯೇ ಹೋದರೂ ಇದನ್ನು ಮರೆಯುವುದಿಲ್ಲ ಎಂದರು.

ಸುಮಾರು 1900 ಕನ್ನಡ ಶಾಲೆಗಳಲ್ಲಿ ತಲಾ ಎರಡು ಮೂರು ಮಕ್ಕಳು ಇದ್ದಾರೆ. ಮಕ್ಕಳಿಲ್ಲದೇ ಅವು ಮುಚ್ಚುವ ಸ್ಥಿತಿಗೆ ಹೋಗುತ್ತಿರುವುದು ವಿಷಾದದ ಸಂಗತಿ. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರು ಸಿಗುವುದು ವಿರಳ ಎಂದರು.

ಕನ್ನಡಾಭಿಮಾನ ಕೇವಲ ನವೆಂಬರ್ ಗೆ ಸೀಮಿತವಾಗಬಾರದು. ಇಡೀ ವರ್ಷ ಆಚರಣೆ ಮಾಡಬೇಕು. ಕನ್ನಡ ಬೆಳೆಯಬೇಕಾದರೆ ಮಹಾನಗರ ಪಾಲಿಕೆ ತಿಂಗಳಿಗೊಂದಾದರೂ ಕನ್ನಡದ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಧೀಮಂತ ಸನ್ಮಾನಕ್ಕೆ ಅರ್ಜಿ ಸಲ್ಲಿಸಿದವರೆಲ್ಲರೂ ಪ್ರಶಸ್ತಿಗೆ ಅರ್ಹರು. ಆದರೆ, ಪಾಲಿಕೆಯು ಕೆಲವು ನಿಯಮಗಳನ್ನು ರೂಪಿಸಿ ಅದರಂತೆ ಆಯ್ಕೆ ಮಾಡಿದೆ. 69 ಜನರನ್ನು ಧೀಮಂತ, 24 ಮಂದಿಯನ್ನು ಬಾಲಪುರಸ್ಕಾರ ಮತ್ತು ವಿಶೇಷ ಸಾಧಕರಾಗಿ ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಡೆದವರು ಸಮಾಜಕ್ಕೆ ಮಾದರಿಯಾಗಿ ನಿಲ್ಲಬೇಕು ಎಂದು ಹೇಳಿದರು.

ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ, ಕನ್ನಡದ ತೇರು ಎಳೆಯುವ ಕಾರ್ಯದಲ್ಲಿ ರಾಜ್ಯದ ಉಳಿದೆಲ್ಲ ಸ್ಥಳಿಯ ಸಂಸ್ಥೆಗಳಿಗಿಂತ ಹುಬ್ಬಳ್ಳಿ ಧಾರವಾಡ ಮಹಾನಗರ ಮುಂಚೂಣಿಯಲ್ಲಿದೆ. ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಮಾಡುತ್ತ ಬಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್ ರಾಮಪ್ಪ ಬಡಿಗೇರ ಅವರು, ಸುಂದರ ಕನ್ನಡ ನಾಡು ಕಟ್ಟಲು ಮಹಾನಗರದ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net