ಸೆ.2ರಿಂದ ಕಾಮಗಾರಿ ಸ್ಥಗಿತಕ್ಕೆ ಪಾಲಿಕೆ ಗುತ್ತಿಗೆದಾರರ ಸಂಘ ನಿರ್ಧಾರ

contractormeeting
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಬಾಕಿ ಬಿಲ್ ಪಾವತಿಯಲ್ಲಿ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘವು ಸೋಮವಾರದಿಂದ (ಸೆ.2) ಅನಿರ್ದಿಷ್ಟಾವಧಿವರೆಗೆ ಎಲ್ಲ ಬಗೆಯ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಶುಕ್ರವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಂಘದ ಸಭೆಯಲ್ಲಿ 400ಕ್ಕೂ ಹೆಚ್ಚು ಗುತ್ತಿಗೆದಾರರು ಪಾಲ್ಗೊಂಡು ಪ್ರತಿಭಟನೆ ನಡೆಸುವ ತೀರ್ಮಾನಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮಾಹಿತಿಯನ್ನು ಪಾಲಿಕೆ ಮುಖ್ಯಸ್ಥರ ಗಮನಕ್ಕೆ ತಂದು ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಸಭೆ ಬಳಿಕ ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್ ಮಾತನಾಡಿ, 2021ರ ಏಪ್ರಿಲ್‌ನಿಂದ ಕಾಮಗಾರಿಗಳ ಬಿಲ್ ಮೊತ್ತದಲ್ಲಿ ಶೇ.75 ಮೊತ್ತವನ್ನು ಬಿಡುಗಡೆಗೊಳಿಸಲಾಗುತ್ತಿದೆ. ಉಳಿದ ಶೇ.25 ಹಣವನ್ನು ನಂತರದಲ್ಲಿ ಪಾವತಿಸುವ ಆಶ್ವಾಸನೆ ನೀಡಲಾಗಿತ್ತುದೆ. ಆದರೆ, ಈವರೆಗೂ ಆ ಹಣ (1,500 ಕೋಟಿ ರೂ.) ಪಾವತಿಯಾಗಿಲ್ಲ. ಈ ವಿಷಯವಾಗಿ ಡಿಸಿಎಂ ಅವರೊಂದಿಗೆ ನಡೆದ ಸಭೆಯಲ್ಲಿ ಶೇ.25 ಬಾಕಿ ಮೊತ್ತ ಬಿಡುಗಡೆಗೆ ಮುಖ್ಯ ಆಯುಕ್ತರಿಗೆ ಸೂಚಿಸಿದ್ದರೂ, ಈವರೆಗೂ ಗುತ್ತಿಗೆದಾರರಿಗೆ ಹಣ ಪಾವತಿಯಾಗಿಲ್ಲ ಎಂದು ದೂರಿದರು.

ಪಾಲಿಕೆಯಲ್ಲಿ ಹಣ ಇದೆ. ಆದರೆ, ಆ ಹಣವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದು ಅಧಿಕಾರಿಗಳಿಗೆ ತಿಳಿಯುತ್ತಿಲ್ಲ. ಸರ್ಕಾರದ ಸೂಚನೆಯನ್ನು ಪಾಲಿಸದ ಅಧಿಕಾರಿ ವರ್ಗ ಗುತ್ತಿಗೆದಾರರನ್ನು ಶೋಷಣೆ ಮಾಡುತ್ತಿದೆ. ಈ ಬಾರಿ ಬಾಕಿ ಹಣ ಪಾವತಿಸುವವರೆಗೂ ಪಾಲಿಕೆಯ ರಸ್ತೆ ಮೂಲಸೌಕರ್ಯ, ಕೆರೆ, ಬೃಹತ್ ರಸ್ತೆಗಳು, ವಾರ್ಡ್ ಮಟ್ಟದ ಕಾಮಗಾರಿಗಳು, ನೀರುಗಾಲುವೆ, ವೈಟ್ ಟಾಪಿಂಗ್, ವಿದ್ಯುತ್ ಸಂಬಂಧಿತ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ನಂದಕುಮಾರ್ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net