

ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಅಧಿಕಾರಿ, ಸಿಬ್ಬಂದಿ ಮುಸುಕಿನ ಗುದ್ದಾಟ ತೀವ್ರರೂಪ ಪಡೆದುಕೊಂಡಿದ್ದು, ಪಾಲಿಕೆ ಆಯುಕ್ತರ ವಿರುದ್ಧವೇ ಪಾಲಿಕೆ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿದ್ದಾರೆ.
ಪಾಲಿಕೆಯಲ್ಲಿ ಕೆಲಸದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಪಾಲಿಕೆ ಆಯುಕ್ತ್ತೆ ಶುಭ ಬಿ. ಕೇವಲ ನಾಲ್ಕು ದಿನದಲ್ಲಿ 30 ರಿಂದ 40 ಸಿಬ್ಬಂದಿಯನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿದ್ದಾರೆ. ಆಡಳಿತ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಿದ್ದು, ವಾರ್ಡ್‌ಗಳ ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರಿದೆ. ಕೆಲ ಸಿಬ್ಬಂದಿ ವರ್ಗಾವಣೆಯನ್ನು ಏಕಾಏಕಿ ರದ್ದುಗೊಳಿಸಿ ಅದೇ ಸ್ಥಳದಲ್ಲಿ ಮುಂದುವರಿಯುವಂತೆ ಮಾಡಿದ್ದಾರೆ. ಅಲ್ಲದೆ, ಆಯುಕ್ತರ ಆಪ್ತ ಸಿಬ್ಬಂದಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಇತರ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ. ಕೆಲವರ ಅಮಾನತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಬೇದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಪಾಲಿಕೆಯಲ್ಲಿ ಶೇ.100ರಷ್ಟು ಸಿಬ್ಬಂದಿ ಅವಶ್ಯಕತೆಯಿದ್ದು, ಶೇ.30ರಷ್ಟು ಮಂದಿ ಮಾತ್ರ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ನಾಲ್ಕು ಜನ ಮಾಡುವ ಕೆಲಸವನ್ನು ಒಬ್ಬರೇ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಯುಕ್ತರು ಪದೇಪದೆ ಸಿಬ್ಬಂದಿ ವರ್ಗಾವಣೆ ಮಾಡಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ. ಪಾಲಿಕೆಯ ಆಯಾ ವಿಭಾಗದ ಮುಖ್ಯಸ್ಥರ ಗಮನಕ್ಕೆ ತಾರದೆ ಎಲ್ಲವನ್ನೂ ತಾವೇ ನಿರ್ಣಯ ಕೈಗೊಳ್ಳುತ್ತಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸವನ್ನು ಆಯುಕ್ತ್ತೆ ಶುಭ ಬಿ. ಅವರು ಮಾಡುತ್ತಿದ್ದಾರೆ ಎಂದರು. ಮಹಾನಗರ ಪಾಲಿಕೆ ಒಳಗೆ 5-6 ಲಕ್ಷ ಜನಸಂಖ್ಯೆ ಹೊಂದಿದ್ದು, ಸುಗಮ ಆಡಳಿತ ದೃಷ್ಟಿಯಿಂದ ಆಡಳಿತ ನಡೆಸಲು ಕೆಎಎಸ್ ಹಿರಿಯ ಶ್ರೇಣಿ ಅಥವಾ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲು ಅವಶ್ಯವಿದೆ ಎಂದು ಮನವಿ ಮೂಲಕ ವಿನಂತಿಸಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ನಡುವೆ ಮುಸುಕಿನ ಕಿತ್ತಾಟ ಇದೆ ಎಂದು ಕೆಲವು ದಿನಗಳ ಹಿಂದೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೆ ಇದೀಗ ಈ ಕಿತ್ತಾಟ ಬಹಿರಂಗಗೊಂಡಿದೆ. ಈ ಮೂಲಕ ನಿಖರ ವರದಿ ಮಾಡಿ ವಿಜಯವಾಣಿ ಎಲ್ಲರ ಗಮನ ಸೆಳೆದಿದೆ.
ಪಾಲಿಕೆ ಆಯುಕ್ತರ ವಿರುದ್ಧ ನೌಕರರ ಸಂಘಟನೆ ಮನವಿ ಸಲ್ಲಿಸಿದ್ದು, ಈ ಕುರಿತು ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಪಾಲಿಕೆಯಲ್ಲಿ ಅಧಿಕಾರಿ, ಸಿಬ್ಬಂದಿ ನಡುವಿನ ಸಮಸ್ಯೆ ಕುರಿತು ವರದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. | ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ