ಅನಧಿಕೃತ ಜಾಹೀರಾತು ಮುಕ್ತಕ್ಕೆ ಪಾಲಿಕೆ ಅಭಿಯಾನ

Vijayavani-logo
Published on

ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರಗಳು ಸೇರಿ ಇನ್ನಿತರ ಜಾಹೀರಾತುಗಳನ್ನು ಅನಧೀಕೃತವಾಗಿ ಅಳವಡಿಸಿದ್ದಲ್ಲಿ ಅಂತಹವುಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದು ತೆರವುಗೊಳಿಸುವ ಅಭಿಯಾನವನ್ನು ಆರಂಭಿಸಲಾಗಿದೆ.

ಅಭಿಯಾನದ ಭಾಗವಾಗಿ ನಿವಾಸಿಗಳ ಕ್ಷೇಮಾಭಿವೃಧ್ಧಿ ಸಂಘಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ನಾಗರಿಕರು ಪಾಲಿಕೆಯ ಜಾಹೀರಾತು ವಿಭಾಗದ ವಾಟ್ಸ್‌ಅಪ್ ಸಂಖ್ಯೆ 9480683939 ಕ್ಕೆ ಛಾಯಾಚಿತ್ರ ಸಹಿತ ಸ್ಥಳದ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದಾಗಿದೆ. ಜತೆಗೆ ದಕ್ಷಿಣ ವಲಯ ನಿಯಂತ್ರಣ ಕೊಠಡಿಯ ದೂ: 080-26566362 / 22975704 ಕ್ಕೆ ಕರೆ ಮಾಡಿ ದೂರು ನೀಡಬಹುದಾಗಿದೆ ಎಂದು ವಲಯ ಜಂಟಿ ಆಯುಕ್ತ ಶಿವಕುಮಾರ್ ತಿಳಿಸಿದ್ದಾರೆ.

ನಾಗರಿಕರು ನೀಡಿದ ಮಾಹಿತಿ ಆಧರಿಸಿ ಅಂತಹ ಸ್ಥಳದಲ್ಲಿ ಅನಧಿಕೃತ ಜಾಹೀರಾತು ಫಲಕಗಳಿದ್ದಲ್ಲಿ ಸಂಬಂಧಿಸಿದವರಿಗೆ ದಂಡ ವಿಧಿಸಿ ತಕ್ಷಣವೇ ತೆರವುಗೊಳಿಸುವುದು. ಜತೆಗೆ ನಿಯಮ ಉಲ್ಲಂಸಿರುವವರ ವಿರುದ್ಧ ಎಫ್ಐಆರ್ ದಾಖಲು ಮಾಡಿ, ಕಾನೂನು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.

77 ಹೋರ್ಡಿಂಗ್ಸ್ ತೆರವು:

ಪ್ರಸ್ತುತ ಜಾರಿಯಲ್ಲಿರುವ ಬಿಬಿಎಂಪಿಯ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪ ವಿಧಿಗಳು-2018ರ ನಿಯಮದಡಿ ಅಂಗಡಿ ಮುಂಗಟ್ಟು ಜಾಹೀರಾತುಗಳು, ವಾಹನ ಸ್ವ-ಜಾಹೀರಾತು ಇನ್ನಿತರ ಸಣ್ಣಪುಟ್ಟ ಜಾಹೀರಾತುಗಳನ್ನು ಸೀಮಿತ ಅವಧಿಗೆ ಮತ್ತು ಸೀಮಿತ ಅಳತೆಗೆ (ಪಿಪಿಪಿ ಯೋಜನೆಗಳು ಸೇರಿ) ಅನುಮತಿಸಲು ಮಾತ್ರ ಅವಕಾಶವಿರುತ್ತದೆ. ಇವುಗಳನ್ನು ಹೊರತುಪಡಿಸಿ ಇತರ ಯಾವುದೇ ವಸತಿ, ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕ ಅಳವಡಿಸುವುದನ್ನು ನಿಷೇಧಿಸಲಾಗಿದೆ. ಈಗಾಗಲೇ ವಲಯದಲ್ಲಿರುವ 77 ಅನಧಿಕೃತ ಕಬ್ಬಿಣದ ಹೋರ್ಡಿಂಗ್ಸ್‌ಅನ್ನು ತೆರವುಗೊಳಿಸಿದ್ದು, ಉಳಿದ 4 ಸ್ಥಾವರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net