

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ರಾಜ್ಯದ ವಿವಿಧ ನಿಗಮ-ಮಂಡಳಿಗಳ ನೇಮಕಾತಿಗೆ ಆಡಳಿತರೂಢ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಸಿರು ನಿಶಾನೆ ತೋರಿದ್ದು, ಇದರ ಬೆನ್ನಲ್ಲೇ ಆಯಕಟ್ಟಿನ ಜಾಗ ಹಿಡಿಯಲು ಜಿಲ್ಲೆಯ ಕಾಂಗ್ರೆಸ್ ನಾಯಕರು ಲಾಬಿ ಶುರು ಮಾಡಿದ್ದಾರೆ. ತೆರೆಮರೆಯಲ್ಲಿ ಒತ್ತಡ ಹೇರುವ ತಂತ್ರ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ನಿಗಮ-ಮಂಡಳಿಗಳ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನಗಳ ನೇಮಕಾತಿಗೆ ತೀವ್ರ ಪೈಪೋಟಿ ಕಂಡುಬಂದಿದೆ. ಯಾರು ಅಧಿಕಾರದ ಗಾದಿ ಹಿಡಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ನಿಗಮ-ಮಂಡಳಿಗಳ ನೇಮಕಕ್ಕೆ ಒಪ್ಪಿಗೆ ನೀಡಿದ ಬಳಿಕ ಹೊಸ ಸೂತ್ರವೊಂದನ್ನು ಕಾಂಗ್ರೆಸ್ ವರಿಷ್ಠರು ಸಿದ್ಧಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಶಾಸಕರ ಅಭಿಪ್ರಾಯವನ್ನು ಆಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನೇಮಕಾತಿ ಪ್ರಕ್ರಿಯೆ ತ್ವರಿತಗೊಳ್ಳುತ್ತಿದ್ದಂತೆ ನಿಗಮ-ಮಂಡಳಿಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಚುರುಕುಗೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಅಧಿಕಾರಕ್ಕಾಗಿ ದುಂಬಾಲು ಬಿದ್ದಿದ್ದಾರೆ. ರಾಜ್ಯ ನಾಯಕರ ಮೇಲೆ ಒತ್ತಡ ಹೇರುವ ಮತ್ತು ಮನವೊಲಿಸುವ ಕೆಲಸವನ್ನು ಮಾಡುತ್ತಿದ್ದು, ಇವರ ಮೂಲಕವಾದರೂ ಅಧಿಕಾರದ ಗದ್ದುಗೆ ದೊರೆಯಲಿ ಎಂಬ ಲೆಕ್ಕಾಚಾರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ರಾಜ್ಯದ ನಿಗಮ ಮಂಡಳಿಗಳ ವಿವಿಧ ಸ್ಥಾನಗಳಿಗೆ ಜಿಲ್ಲೆಯಿಂದ 1770 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಿಂದಲೂ ಆಕಾಂಕ್ಷಿಗಳ ದೊಡ್ಡ ದಂಡು ಇದೆ. ಕೆ.ಆರ್.ನಗರದಿಂದ 227, ಎಚ್.ಡಿ.ಕೋಟೆ-223, ವರುಣ- 100, ಚಾಮುಂಡೇಶ್ವರಿ-200, ಪಿರಿಯಾಪಟ್ಟಣ-110, ಹುಣಸೂರು-285, ತಿ.ನರಸೀಪುರ-200, ನಂಜನಗೂಡಿನಿಂದ 275 ಅಲ್ಲದೆ, ನೇರವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ 150 ಅರ್ಜಿಗಳು ಸಲ್ಲಿಕೆಯಾಗಿವೆ.
ಬರೋಬ್ಬರಿ 1770 ಆಕ್ಷಾಂಕ್ಷಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಪ್ರತ್ಯೇಕ ಎರಡು ಪಟ್ಟಿಗಳನ್ನು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲಿಸಲಾಗಿದೆ. ಗಡುವು ಮುಗಿದ ಬಳಿಕ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಅಂಚೆ ಮೂಲಕ ಅಥವಾ ಖುದ್ದು ಸಲ್ಲಿಸಲು ತಿಳಿಸಲಾಗಿದೆ. ಇದರಿಂದಾಗಿ ಅರ್ಜಿ ಸಲ್ಲಿಸದೆ ಇರುವ ಇನ್ನಷ್ಟು ಹೆಸರು ಸೇರ್ಪಡೆಗೊಂಡಿವೆ ಎಂದು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಮೊದಲ ಬಾರಿಗೆ ಅರ್ಜಿ ಆಹ್ವಾನ ಮಾಡಿ ಹೊಸ ಸಂಪ್ರದಾಯವನ್ನು ಹುಟ್ಟುಹಾಕಲಾಗಿದೆ. ಕೆಳ ಹಂತದ ಕಾರ್ಯಕರ್ತರು ಸಹ ನಿಗಮ-ಮಂಡಳಿ ಸ್ಥಾನ ಪಡೆದುಕೊಳ್ಳಲು ಮುಕ್ತ ಅವಕಾಶವನ್ನು ಕಾಂಗ್ರೆಸ್ ಕಲ್ಪಿಸಿಕೊಟ್ಟಿದೆ. ಇದರಿಂದಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.
ನಿಗಮ-ಮಂಡಳಿಯ ನೇಮಕಾತಿ ಮಾರ್ಗಸೂಚಿಯನ್ನೂ ಪಕ್ಷ ತಯಾರು ಮಾಡಿಕೊಂಡಿದೆ. ಪಕ್ಷದಲ್ಲಿ ದೀರ್ಘಾವಧಿಯಲ್ಲಿ ಕೆಲಸ ಮಾಡಿರುವ, ಇಲ್ಲಿಯ ತನಕ ಯಾವುದೇ ಹುದ್ದೆಯನ್ನು ಅನುಭವಿಸದ, ಯಾವುದೇ ಜನಪ್ರತಿನಿಧಿ ಅಲ್ಲದ, ಜಾತಿ ಅನುಪಾತ ಆಧರಿಸಿ ಆದ್ಯತೆ ಕಲ್ಪಿಸಿಕೊಡಲು ಕೆಪಿಸಿಸಿ ಮುಂದಾಗಿದೆ ಎಂದೂ ತಿಳಿಸಿದರು.
ಪಕ್ಷದಲ್ಲಿ ಸೇವೆ ಸಲ್ಲಿಸಿದ ಪ್ರಾಮಾಣಿಕ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು ಎಂಬ ಕಾರಣದಿಂದ ಮುಕ್ತವಾಗಿ ಅರ್ಜಿ ಮೂಲಕ ಆಯ್ಕೆ ಮಾಡಲು ಕೆಪಿಸಿಸಿ ನಿರ್ಧರಿಸಿದೆ. ಪ್ರತಿ ತಾಲೂಕಿನ ಸ್ಕ್ರೀನಿಂಗ್ ಕಮಿಟಿಯಿಂದ ಶಿಫಾರಸು ಮಾಡಿರುವ ಆಕಾಂಕ್ಷಿಗಳ ಪಟ್ಟಿ ತಯಾರು ಮಾಡಲಾಗಿದೆ.
ಸ್ಥಳೀಯ ಶಾಸಕರು, ಮಾಜಿ ಶಾಸಕರು, ಆ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಒಳಗೊಂಡ ಸ್ಕ್ರೀನಿಂಗ್ ಸಮಿತಿ ಸಮಾಲೋಚನೆ ನಡೆಸಿ ಅಂತಿಮ ಹೆಸರು ತಯಾರಿ ಮಾಡಿವೆ. ಇದರಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ಸದ್ಯಕ್ಕೆ ಕೌತುಕ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ಬಹಳಷ್ಟು ಆಕಾಂಕ್ಷಿಗಳ ದೃಷ್ಟಿ ನೆಟ್ಟಿದೆ. ಉಳಿದಂತೆ, ಜಿಲ್ಲಾ ವ್ಯಾಪ್ತಿಯ ಮೈಸೂರು ಪೇಯಿಂಟ್ಸ್ ಆ್ಯಂಡ್ ವಾರ್ನಿಷ್ (ಮೈಲಾಕ್), ಕರ್ನಾಟಕ ಮೃಗಾಲಯ ಪ್ರಾಧಿಕಾರ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ಕಾಡಾ, ಜಂಗಲ್ ಆ್ಯಂಡ್ ರೆಸಾರ್ಟ್ಸ್ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನಗಳಿಗಿ ಆಕಾಂಕ್ಷಿಗಳು ಪ್ರಯತ್ನಿಸುತ್ತಿದ್ದಾರೆ.
ಈ ಪೈಕಿ ಮುಡಾ ಅಧ್ಯಕ್ಷಗಿರಿ ಗಿಟ್ಟಿಸಿಕೊಳ್ಳಲು ತೀವ್ರ ಪೈಪೋಟಿ ನಡೆಯುತ್ತಿದೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಲಾಬಿ ನಡೆಸಿದ್ದಾರೆ. ಇವರಿಬ್ಬರೂ ಸಿಎಂ ಸಿದ್ದರಾಮಯ್ಯ ಆಪ್ತರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮರಿಗೌಡ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಆಗಿದ್ದರು. ಆದರೆ ಇವರನ್ನು ಬಿಟ್ಟು ಜೆಡಿಎಸ್‌ನಿಂದ ಕರೆತಂದಿದ್ದ ಮಾವಿನಹಳ್ಳಿ ಸಿದ್ದೇಗೌಡರಿಗೆ ಟಿಕೆಟ್ ನೀಡಲಾಯಿತು. ಇದರಿಂದ ಅಸಮಾಧಾನಗೊಂಡಿದ್ದ ಇವರನ್ನು ಮುಡಾ ಅಧ್ಯಕ್ಷ ಸ್ಥಾನ ನೀಡುವ ಭರವಸೆಯೊಂದಿಗೆ ಸುಮ್ಮನಿರಿಸಲಾಯಿತು.
ಆದರೀಗ ಇವರಿಗೆ ಪೈಪೋಟಿ ಎದುರಾಗಿದೆ. ಕಳೆದ ಚುನಾವಣೆಯಲ್ಲಿ ಸೋತಿರುವ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಈ ಸ್ಥಾನಕ್ಕಾಗಿ ಪಟ್ಟುಹಿಡಿದ್ದಾರೆ. ಹುಣಸೂರಿನ ಮಾಜಿ ಶಾಸಕ ಎಚ್.ಪಿ.ಮಂಜುನಾಥ ಅವರ ಹೆಸರು ಕೂಡ ಕೇಳಿಬರುತ್ತಿದೆ.
ಮೈಸೂರು ಕೇಂದ್ರಿತ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮೇಯರ್‌ಗಳಾದ ಆರಿಫ್ ಹುಸೇನ್, ಅಯೂಬ್ ಖಾನ್ ಪ್ರಬಲ ಆಕಾಂಕ್ಷಿಗಳು. ಮೈಲ್ಯಾಕ್, ಮೃಗಾಲಯ ಪ್ರಾಧಿಕಾರಕ್ಕೆ ವಿವಿಧ ಹೆಸರು ಕೇಳಿಬರುತ್ತಿವೆ. ಕಾಡಾ ಅಧ್ಯಕ್ಷ ಸ್ಥಾನ ಮಂಡ್ಯ, ಚಾಮರಾಜನಗರಕ್ಕೆ ಹಂಚಿಕೆ ಆಗುವ ಸಾಧ್ಯತೆ ಇದೆ.