ಮಳೆ ಅನಾಹುತ ತಡೆಗೆ ಪಾಲಿಕೆ ಕ್ರಮ: ತುಷಾರ್ ಗಿರಿನಾಥ್

Vijayavani-logo
Published on

ಬೆಂಗಳೂರು: ನಗರದಲ್ಲಿ ಮಳೆ ಅನಾಹುತ ತಡೆಗೆ ಪಾಲಿಕೆ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಚರಂಡಿ, ರಸ್ತೆಬದಿ ಡ್ರೈನ್ ಹಾಗೂ ರಾಜಕಾಲುವೆಗಳಲ್ಲಿ ಹೂಳೆತ್ತಿ ಸ್ವಚ್ಚಗೊಳಿಸು ಕಾರ್ಯ ಪ್ರಗತಿಯಲ್ಲಿರುವುದರಿಂದ ಮಳೆಹಾನಿ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಪೂರ್ವ ಮುಂಗಾರು ವೇಳೆ ನಗರದಲ್ಲಿ 40-60 ಮಿ.ಮೀ. ವರೆಗೆ ಮಳೆಯಾಗಿದ್ದರೂ, ಯಾವುದೇ ಹಾನಿ ಆಗಿಲ್ಲ. ಇನ್ನೂ ಹೆಚ್ಚಿನ ಪ್ರಮಾಣದ ವರ್ಷಧಾರೆಯಾದರೂ ಅನಾಹುತ ತಡೆಗೆ ಪಾಲಿಕೆ ಸಜ್ಜಾಗಿದೆ. ಇದಕ್ಕಾಗಿ 63 ತಂಡಗಳನ್ನು ರಚಿಸಿದ್ದು, ಅಗತ್ಯ ಸಲಕರಣೆ ಹಾಗೂ ಸಿಬ್ಬಂದಿಯನ್ನೂ ಒದಗಿಸಲಾಗಿದೆ. ಹೆಚ್ಚು ಮಳೆನೀರು ಸಂಗ್ರಹಗೊಳ್ಳುವ ಸ್ಥಳಗಳಲ್ಲಿ ಪಂಪ್‌ಸೆಟ್ ಹಾಗೂ ಮೋಟಾರನ್ನು ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಹಾಗೂ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಹಾನಿ ತಪ್ಪಿಸಲು ಮೇ 15ರಿಂದ 30ರ ವರೆಗೆ ಚರಂಡಿಗಳ ಸ್ವಚ್ಚತೆ ಹಾಗೂ ಕಾಲುವೆಗಳಲ್ಲಿ ಪ್ಲಾಸ್ಟಿಕ್ ಹೊರತೆಗೆಯುವ ಕೆಲಸವನ್ನು ಆರಂಭಿಸಲಾಗಿದೆ. ಅಪಾಯಕಾರಿ ಮರ ಹಾಗೂ ಟೊಂಗೆಗಳನ್ನು ತೆರವು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಕಚೇರಿ ಸೇರಿ ಎಲ್ಲ ಎಂಟೂ ವಲಯಗಳಲ್ಲಿ ಕಂಟ್ರೋಲ್ ರೂಂ ಆರಂಭಿಸಿದ್ದು, ನಾಗರಿಕರ ದೂರುಗಳಿಗೆ ತುರ್ತಾಗಿ ಸ್ಪಂದಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಮನ್ವಯಕ್ಕೆ ಆದ್ಯತೆ:

ನಗರದ ಕೆಲ ಪ್ರದೇಶಗಳಲ್ಲಿರುವ ರಾಜಕಾಲುವೆಗಳನ್ನು ಪೂರ್ಣವಾಗಿ ಅಭಿವೃದ್ಧಿಪಡಿಸಿಲ್ಲ. ಜಲಮಂಡಳಿ ಕೂಡ ರಾಜಕಾಲುವೆಗಳಲ್ಲಿ ಸೀವೇಜ್ ಲೇನ್ ಹಾಕಿದ್ದು ಅವುಗಳನ್ನು ಈ ತಿಂಗಳಾಂತ್ಯದೊಳಗೆ ತೆರವು ಮಾಡಲು ಗಡುವು ನೀಡಲಾಗಿದೆ. ಮಳೆಯಿಂದ ನಾಗರಿಕರಿಗೆ ತೊಂದರೆ ಉಂಟಾಗದಂತೆ ಎಚ್ಚರ ವಹಿಸಲು ಬಿಬಿಎಂಪಿಯು ಬೆಸ್ಕಾಂ ಹಾಗೂ ಜಲಮಂಡಳಿಯೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಕಂಡುಕೊಳ್ಳಲು ವಲಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಾರೆ ಮಳೆ ಅನಾಹುತ ತಡೆಗೆ ಪಾಲಿಕೆ ಸರ್ವ ಸನ್ನದ್ಧವಾಗಿದೆ ಎಂದು ಮುಖ್ಯ ಆಯುಕ್ತರು ವಿವರಿಸಿದರು.

ಬೋರ್‌ವೆಲ್ ಸೌಲಭ್ಯ ಸ್ಥಗಿತವಿಲ್ಲ:

ಮಹಾನಗರದ ವಿವಿಧ ಭಾಗಗಳಲ್ಲಿ ನೀರಿನ ಅಭಾವ ನಿವಾರಿಸಲು 110 ಹಳ್ಳಿಗಳು ಹಾಗೂ ಹೊಸ ವಲಯಗಳಲ್ಲಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಇಲ್ಲೆಲ್ಲ ಕೊಳವೆಬಾವಿ ಕೊರೆಯುವುದನ್ನು ಸ್ಥಗಿತಗೊಳಿಸುವಂತೆ ಸೂಚಿಸಿಲ್ಲ. ಮುಂಗಾರು ಮಳೆ ಬರುವವರೆಗೂ ನಾವು ಕಾದುನೋಡಬೇಕಾಗುತ್ತದೆ. ಆದರೂ, ಮೇ 31ರ ಬಳಿಕ ಹೊಸ ಬೋರ್‌ವೆಲ್ ಕೊರೆಯುವುದಕ್ಕೆ ಮಿತಿ ಹಾಕಿಕೊಳ್ಳಲಿದ್ದು, ಈಗಾಗಲೇ ಕೊರೆದಿರುವ ಎಲ್ಲ ಕೊಳವೆಬಾವಿಗಳಿಗೆ ಪಂಪ್‌ಸೆಟ್ ಜೋಡಿಸಿ ನೀರು ಪೂರೈಸಲಾಗುವುದು. ಈ ಕಾರ್ಯಕ್ಕೆ ಹಣಕಾಸಿನ ಸಮಸ್ಯೆ ಇಲ್ಲ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net