

ಹುಬ್ಬಳ್ಳಿ: ಇದು ಚುನಾವಣೆ ಪರ್ವ. ಎಲ್ಲೆಲ್ಲೂ ಚುನಾವಣೆ ಕಾವು ಏರುತ್ತಿದೆ. ಪ್ರತಿಯೊಬ್ಬರೂ ಮತದಾನ ಮಾಡಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಹಲವು ಉಪಕ್ರಮಗಳನ್ನು ಕೈಗೊಂಡಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಸಹ ಮತದಾನ ಜಾಗೃತಿ ಮೂಡಿಸುತ್ತಿದೆ. ಆದರೆ, ಪಾಲಿಕೆಯವರು ಕನ್ನಡ ಮರೆತು ಕೇವಲ ಇಂಗ್ಲಿಷ್ ಹಾಗೂ ಹಿಂದಿ ಬರಹಗಳ ಮೂಲಕ ಅರಿವು ಮೂಡಿಸುತ್ತಿರುವುದು ಕನ್ನಡ ಪ್ರೇಮಿಗಳು ಕಣ್ಣು ಕೆಂಪಗಾಗಿಸಿದೆ.
ಇಲ್ಲಿಯ ವಿದ್ಯಾನಗರದ ಕಾಳಿದಾಸನಗರ ಕ್ರಾಸ್ನಲ್ಲಿ ಬುಧವಾರ ರಸ್ತೆ ಬದಿಯಲ್ಲಿ ಕಸ ಸ್ವಚ್ಛ ಗೊಳಿಸಿ ರಂಗೋಲಿ ಬಿಡಿಸಲಾಗಿದೆ. ಅಂದದ ರಂಗೋಲಿಯ ಚಿತ್ತಾರದ ಮೂಲಕ ಮತದಾನ ಜಾಗೃತಿಯನ್ನು ಪಾಲಿಕೆ ಕೈಗೊಂಡಿದೆ.
ಆದರೆ, ಚಿತ್ರದಲ್ಲಿ ಕನ್ನಡ ಪದಗಳು ಕಂಡು ಬರುವುದಿಲ್ಲ. ಬದಲಾಗಿ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಬರಹಗಳು ಇವೆ. "ಪ್ರತ್ಯೇಕ ವೋಟ್ ಮಹತ್ವರ್ಪೂಣ ಹೈ, ಯುವರ್ ಕಂಟ್ರಿಸ್ ಫ್ಯೂಚರ್ ಇಸ್ ಇನ್ ಯುವರ್ ಫಿಂಗರ್ ಟಿಪ್ಸ್…' ಎಂದು ಬರೆಯಲಾಗಿದೆ.