ಕರೊನಾ ಭಯ ಬೇಡ, ಎಚ್ಚರ ವಹಿಸಿ

6SAVADATTI4_Web
ಸವದತ್ತಿ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿದರು. ಶಾಸಕ ಮಹಾಂತೇಶ ಕೌಜಲಗಿ, ವಿನಯಕುಮಾರ ದೇಸಾಯಿ, ಯಶವಂತಕುಮಾರ, ಪ್ರಶಾಂತ ಪಾಟೀಲ ಇತರರು ಇದ್ದರು.
Published on

ಸವದತ್ತಿ: ಕಾರ್ಲಕಟ್ಟಿ ತಾಂಡಾ, ಇನಾಮಹೊಂಗಲ, ಮುನವಳ್ಳಿ ಗ್ರಾಮಗಳಲ್ಲಿ ಕರೊನಾ ವೈರಸ್ ಸೋಂಕಿತರು ಕಂಡುಬಂದಿದ್ದು, ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಆಡಳಿತ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಕರೊನಾ ವೈರಸ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಆದರೂ, ತಾಲೂಕು ಕೋವಿಡ್-19 ಸೋಂಕಿಗೆ ಶರಣಾಗಿದೆ. ಅಧಿಕಾರಿಗಳು, ಸಾರ್ವಜನಿಕರು ಇದಕ್ಕೆ ಭಯಪಡದೆ ಎಚ್ಚರವಹಿಸಬೇಕು ಎಂದರು. ಅಕ್ಷರ ದಾಸೋಹ ಸಹಾಯ ನಿರ್ದೇಶಕ ವೈ.ಎಫ್. ಪೂಜಾರ ಮಾತನಾಡಿ, ತಾಲೂಕಾದ್ಯಂತ ಒಟ್ಟು 281 ಶಾಲೆಗಳಿಗೆ ಬಿಸಿಯೂಟ ಪೂರೈಕೆಯಾಗಿದೆ. ಕೋವಿಡ್- 19 ಹಿನ್ನೆಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ನೀಡಿಲ್ಲ. ಬದಲಾಗಿ ಬೇಳೆ ಕಾಳು ವಿತರಿಸಲಾಗಿದೆ. ಸದ್ಯಕ್ಕೆ 220 ಕ್ವಿಂಟಾಲ್ ಬೇಳೆ ವಿತರಿಸಲಾಗಿದೆ. ಇನ್ನೂ 224 ಕ್ವಿಂಟಾಲ್ ಬರಬೇಕಿದೆ ಎಂದು ಸಭೆಗೆ ಮಾಹಿತಿ ನೀಡಿದರು. ನರೇಗಾ ಸಹಾಯಕ ನಿರ್ದೇಶಕ ಸಂಗನಗೌಡ ಹಂದ್ರಾಳ ಮಾತನಾಡಿ, ನರೇಗಾ ಯೋಜನೆಯಡಿ ತಾಲೂಕಿನಲ್ಲಿ ಈವರೆಗೆ ಒಟ್ಟು 6.5 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. 10.83 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿದ್ದು, ನಿತ್ಯ 13.5 ಸಾವಿರ ಕೂಲಿಕಾರರು ಕೆಲಸಕ್ಕೆ ಬರುತ್ತಿದ್ದಾರೆ. ಬದು ನಿರ್ಮಾಣ, ಕೃಷಿ ಹೊಂಡ ಸೇರಿ ಅಂತರ್ಜಲ ಹೆಚ್ಚಿಸುವ ಕಾಮಗಾರಿಗಳಿಗೆ ಒತ್ತು ನೀಡಿ 1,281 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಲಾಗಿದೆ. ಈವರೆಗೆ 5.40 ಕೋಟಿ ರೂ. ಕೂಲಿ ಹಣ ಪಾವತಿಸಲಾಗಿದೆ ಎಂದು ತಿಳಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ಎಂ.ಜಿ. ರೇವಣಕರ ಮಾತನಾಡಿದರು. ಶಾಸಕ ಮಹಾಂತೇಶ ಕೌಜಲಗಿ, ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ, ಇಒ ಯಶವಂತಕುಮಾರ, ತಹಸೀಲ್ದಾರ್ ಪ್ರಶಾಂತ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net