

ಬೆಂಗಳೂರು: ಮಹಾಮಾರಿ ಕರೊನಾ ಇಡೀ ಮಾನವ ಕುಲದ ದೈನಂದಿನ ಚಟುವಟಿಕೆಯನ್ನು ಹ್ಯಾಕ್ ಮಾಡಿದೆ. ಲಕ್ಷಾಂತರ ಮಂದಿಯನ್ನು ತನ್ನ ಮೃತ್ಯುಕೂಪಕ್ಕೆ ಸೆಳೆದುಕೊಂಡಿರುವ ಡೆಡ್ಲಿ ವೈರಸ್ಗೆ ಗೇಟ್ಪಾಸ್ ನೀಡಲು ಸಾಕಷ್ಟು ಕ್ರಮುಗಳನ್ನು ಅನುಸರಿಸಲಾಗುತ್ತಿದೆ. ಅದರಲ್ಲಿ ಲಾಕ್ಡೌನ್ ಹಾಗೂ ಸಾಮಾಜಿಕ ಅಂತರ ಬಹುಮುಖ್ಯವಾಗಿದ್ದು, ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಮಾಧ್ಯಮಗಳು ಹಗಲಿರುಳು ಶ್ರಮಿಸುತ್ತಿವೆ.
ಜನರನ್ನು ಆಚೆ ಬರದಂತೆ ನೋಡಿಕೊಂಡು ಕರೊನಾ ಹರಡುವಿಕೆಗೆ ಅವಕಾಶ ನೀಡದಂತೆ ಕಟ್ಟೆಚ್ಚರ ವಹಿಸಿರುವ ಪೊಲೀಸ್ ಇಲಾಖೆಗೆ ಸಲಾಂ ಹೇಳಲೇಬೇಕು. ಜನರ ಕಾಳಜಿಗೆ ಪೊಲೀಸರು ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ನಗರದ ರಾಜರಾಜೇಶ್ವರಿ ನಗರ ಪೊಲೀಸರು ಉದಾಹರಣೆಯಾಗಿ ನಿಂತಿದ್ದಾರೆ. ಲಾಠಿಯನ್ನು ಬದಿಗಿಟ್ಟು ಸಾಮಾಜಿಕ ಅಂತರದ ಅರಿವು ಮೂಡಿಸಲು ಹಾಡೊಂದಕ್ಕೆ ಆರ್ಆರ್ ನಗರ ಠಾಣೆಯ ಪೊಲೀಸರು ಹೆಜ್ಜೆ ಹಾಕಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
"ಕರೊನಾ ವಿ ವಿಲ್ ಕಿಲ್ ಯು" ಎಂಬ ಹಾಡಿಗೆ ಠಾಣೆಯ ಸಿಬ್ಬಂದಿಯೆಲ್ಲರೂ ಒಟ್ಟಾಗಿ ನಿಂತು ಸಖತ್ ಸ್ಟೆಪ್ಸ್ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ವಿನೂತನ ಪ್ರಯತ್ನ ಮಾಡಿದ್ದಾರೆ. ಇಡೀ ಹಾಡಿನಲ್ಲಿ ಕರೊನಾ ಮುಂಜಾಗ್ರತೆ ಕ್ರಮದ ಬಗ್ಗೆ ವಿವರಿಸಲಾಗಿದ್ದು, ಅದನ್ನು ಅಭಿನಯದ ಮೂಲಕ ಪೊಲೀಸ್ ಸಿಬ್ಬಂದಿ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಪೊಲೀಸರೆಂದರೆ ಕೇವಲ ಲಾಠಿ ಹಿಡಿದು ಜನರನ್ನು ಹೆದರಿಸುವುದು ಮಾತ್ರವಲ್ಲ ಅಗತ್ಯವಿದ್ದಾಗ ಜನರ ಕಾಳಜಿಗಾಗಿ ಏನು ಬೇಕಾದರೂ ಮಾಡುತ್ತೇವೆ ಎಂಬುದನ್ನು ನಿರೂಪಿಸಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.