

ಬೆಳಗಾವಿ/ವಿಜಯಪುರ: ಕರೊನಾವೈರಸ್ ನಿಯಂತ್ರಿಸಲು ವಿಧಿಸಲಾಗಿದ್ದ ಲಾಕ್ಡೌನ್ ಮುಂದುವರಿದಿದ್ದು, ಗ್ರಾಮೀಣ ಪ್ರದೇಶದಲ್ಲಿ ಗಂಭೀರ ಕಾಯಿಲೆ ಎದುರಿಸುತ್ತಿರುವವರು ಸೂಕ್ತ ಔಷಧ ಹಾಗೂ ಮಾತ್ರೆ ಸಿಗದೆ ಚಡಪಡಿಸುತ್ತಿದ್ದಾರೆ. ಜನೌಷಧ ಕೇಂದ್ರಗಳ ಮೇಲೂ ಕರಿನೆರಳು ಬಿದ್ದಿದ್ದು, ಇಲ್ಲಿಗೆ ಔಷಧ ಸರಬರಾಜಾಗುವ ದೆಹಲಿ ಹಾಗೂ ಚೆನ್ನೈ ಕೂಡ ಲಾಕ್ಡೌನ್ ಆಗಿದೆ. ಹೀಗಾಗಿ ಜನರಿಗೆ ಅಗ್ಗದ ಔಷಧ ಕೈ ಸೇರುವುದರಲ್ಲಿ ವಿಳಂಬವಾಗಿದೆ. ರೋಗಿಗಳ ಸಂಬಂಧಿಗಳು ಮಾತ್ರೆ, ಔಷಧ ಹುಡುಕಿ ತರುವ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೆಡಿಕಲ್ ಶಾಪ್ಗಳಿಗೆ ಅನುಮತಿ ಇದ್ದರೂ, ವಾಹನ ಸಂಚಾರ ನಿರ್ಬಂಧದಿಂದ ರಾಜಧಾನಿ ಬೆಂಗಳೂರು ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿನ ವಿವಿಧ ಕಾಯಿಲೆ ಪೀಡಿತರು ಸರಿಯಾದ ಸಮಯಕ್ಕೆ ಸೂಕ್ತ ಮಾತ್ರೆ, ಔಷಧ ಸಿಗದೆ ಪರದಾಡುತ್ತಿದ್ದಾರೆ. ಹೃದಯ ಸಂಬಂಧಿ ಕಾಯಿಲೆ, ಅಸ್ತಮಾ, ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿ ಇತರ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೆ ತಾಲೂಕು ಮಟ್ಟದಲ್ಲಿರುವ ಖಾಸಗಿ ವೈದ್ಯರು, ಔಷಧ ಅಂಗಡಿಗಳ ಮಾಲೀಕರು ಅಸುರಕ್ಷತೆಯ ನೆಪವೊಡ್ಡಿ ಅಂಗಡಿ ಬಂದ್ ಮಾಡಿರುವುದು ಮತ್ತಷ್ಟು ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನರು ಮಹಾನಗರದಲ್ಲಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ವೈದ್ಯರು ಬರೆದು ಕೊಡುವ ಮಾತ್ರೆ, ಔಷಧಗಳು ಆಯಾ ಆಸ್ಪತ್ರೆಗಳಲ್ಲಿರುವ ಔಷಧ ಅಂಗಡಿಗಳಲ್ಲಿ ಮಾತ್ರ ಸಿಗುತ್ತವೆ. ಬೇರೆಡೆ ಸಿಗುತ್ತಿಲ್ಲ. ಇದರಿಂದ ರೋಗಿಗಳು ತೀವ್ರ ಸಮಸ್ಯೆಗೀಡಾಗಿದ್ದಾರೆ. ಮಧುಮೇಹ, ರಕ್ತದೊತ್ತಡ ಇನ್ನಿತರ ಕಾಯಿಲೆಗಳಿಗೆ ಪ್ರತಿದಿನ ಔಷಧ ಸೇವನೆ ಅಗತ್ಯವಾಗಿದ್ದು, ಕೆಲವರು ಮುಂಗಡವಾಗಿ ಖರೀದಿಸಿದ್ದಾರೆ. ಅದರಿಂದ ಶೇ.70 ಕೊರತೆ ಕಾಡುತ್ತಿದ್ದು, ಔಷಧಕ್ಕೆ ಬೇಡಿಕೆ ಹೆಚ್ಚಾಗಿದೆ. ನಗರ ಪ್ರದೇಶದಲ್ಲೂ ಪರಿಸ್ಥಿತಿ ಗಂಭೀರವಾಗಿದ್ದು, ಪ್ರತಿಷ್ಠಿತ ಆಸ್ಪತ್ರೆಗಳಷ್ಟೇ ಕೆಲಸ ಮಾಡುತ್ತಿವೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಿದ್ದ ಕ್ಲಿನಿಕ್ಗಳು ಮುಚ್ಚಲ್ಪಟ್ಟು ತೀವ್ರ ಸಮಸ್ಯೆಯಾಗಿದೆ.
ಮೊದಲ ಹಂತದ ಲಾಕ್ಡೌನ್ ಅವಧಿಯಲ್ಲಿ 21 ದಿನಗಳ ಅವಧಿಗೆ ಸಾಕಾಗುವಷ್ಟು ಔಷಧ, ಮಾತ್ರೆಗಳನ್ನು ಕೆಲವರು ಸಂಗ್ರಹಿಸಿ ಇಟ್ಟುಕೊಂಡಿದ್ದರು. ಈಗ ಮೇ 3ರವರೆಗೆ ವಿಸ್ತರಣೆ ಮಾಡಿರುವ ಹಿನ್ನೆಲೆ 18 ದಿನಗಳಿಗೆ ಬೇಕಾಗುವಷ್ಟು ಔಷಧಗಳು ಇಲ್ಲ. ಸರ್ಕಾರ ಕೂಡಲೇ ಗ್ರಾಮೀಣ ಪ್ರದೇಶಗಳಲ್ಲಿರುವ ರೋಗಿಗಳಿಗೆ ಔಷಧ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ರೋಗಿಗಳು ವಿನಂತಿಸಿದ್ದಾರೆ.
ಐದು ವರ್ಷಗಳಿಂದ ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದೇನೆ. ಪ್ರತಿ ದಿನ ಮಾತ್ರೆ ಸೇವಿಸಬೇಕು. ಆದರೆ ಮಾತ್ರೆಗಳು ಲಭ್ಯವಾಗುತ್ತಿಲ್ಲ. ಕೇಳಿದರೆ ಖಾಲಿ ಆಗಿವೆ ಎಂದು ಔಷಧ ಮಾರಾಟಗಾರರು ಹೇಳುತ್ತಾರೆ. | ಜಯಶ್ರೀ ಕುಲಕರ್ಣಿ ಮಧುಮೇಹಿ, ವಿಜಯಪುರ
ಖಾಸಗಿಯತ್ತ ವೈದ್ಯರ ಚಿತ್ತ
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಹೋದರೆ ಅವರಿಗೆ ವೈದ್ಯರು ಬ್ರ್ಯಾಂಡೆಡ್ ಔಷಧ ಬರೆದುಕೊಡುತ್ತಿದ್ದಾರೆ. ಅವು ಜನೌಷಧ ಕೇಂದ್ರಗಳಲ್ಲಿ ಕೇಳಿದರೆ ಲಭ್ಯ ಇಲ್ಲ ಎನ್ನುತ್ತಾರೆ. ಅನಿವಾರ್ಯವಾಗಿ ರೋಗಿಗಳು ಖಾಸಗಿ ಮಳಿಗೆಗಳಿಗೆ ತೆರಳುವಂತಾಗಿದೆ. ಅಲ್ಲಿಯೂ ಔಷಧದ ಕೊರತೆ ಕಾಡುತ್ತಿದ್ದು, ದುಬಾರಿ ಬೆಲೆಯ ಔಷಧ ಖರೀದಿಸಲಾಗದೆ ರೋಗಿಗಳು ಪರದಾಡುವಂತಾಗಿದೆ.
ಔಷಧಕ್ಕಾಗಿ 150 ಕಿ.ಮೀ. ಪ್ರಯಾಣ
ಹೃದಯ ಮತ್ತು ಅಸ್ತಮಾ ಕಾಯಿಲೆಗೆ ಸಂಬಂಧಿಸಿದ 30 ರೂ. ಮಾತ್ರೆ ತೆಗೆದು ಕೊಳ್ಳಲು 150 ಕಿ.ಮೀ. ದೂರದ ಬೆಳಗಾವಿ ನಗರಕ್ಕೆ ಹೋಗಿ ಬರಬೇಕು. ಲಾಕ್ಡೌನ್ ಮುನ್ನವೇ ತಿಂಗಳ ಔಷಧ, ಮಾತ್ರೆಗಳನ್ನು ತೆಗೆದುಕೊಂಡು ಬರಲಾಗಿತ್ತು. ಮತ್ತೆ ವಿಸ್ತರಣೆ ಮಾಡಿರುವುದರಿಂದ ಸಮಸ್ಯೆಯಾಗಿದೆ. ಔಷಧ ತೆಗೆದುಕೊಳ್ಳದಿದ್ದರೆ ಆರೋಗ್ಯ ಕೈ ಕೊಡುವ ಭಯ ಕಾಡುತ್ತಿದೆಂದು ಅಥಣಿ ತಾಲೂಕಿನ ರಾಮಪ್ಪ ಎಸ್.ಬಳಸಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಹೊರ ರೋಗಿಗಳಿಗೆ ಸಿಗದ ಆದ್ಯತೆ
ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗ ತೆರೆದಿವೆ. ಆದರೆ, ವೈದ್ಯರು ಕರೊನಾ ಸೋಂಕು ತಡೆಗಟ್ಟುವತ್ತ ಮುಖ ಮಾಡಿದ್ದರಿಂದ ಸಾಮಾನ್ಯ ರೋಗಿಗಳ ತಪಾಸಣೆಗೆ ಕಡಿಮೆ ಆದ್ಯತೆ ನೀಡಲಾಗುತ್ತಿದೆ. ತೀರಾ ತುರ್ತು ಸ್ಥಿತಿಯಲ್ಲಿದ್ದವರಿಗೆ ಚಿಕಿತ್ಸೆ ದೊರೆಯುತ್ತಿದೆ. ತಿಂಗಳಿಗೊಮ್ಮೆ ಚಿಕಿತ್ಸೆ ಮಾಡಿಸಿಕೊಳ್ಳುವವರಿಗೆ ಮೇ 3ರವರೆಗೆ ಮಾತ್ರೆ ಸೇವನೆ ಮುಂದುವರಿಸುವಂತೆ ವೈದ್ಯರು ಹೇಳುತ್ತಿದ್ದಾರೆ. ಆದರೆ, ಮಾತ್ರೆ ತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರೋಗಿಗಳು ಗೋಳು ತೋಡಿಕೊಳ್ಳುತ್ತಿದ್ದಾರೆ.
| ಮಂಜುನಾಥ ಕೋಳಿಗುಡ್ಡ ಬೆಳಗಾವಿ/ ಹೀರಾನಾಯ್ಕ ಟಿ. ವಿಜಯಪುರ