

ಬೆಂಗಳೂರು: ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್ಡೌನ್ ಮಾಡಬೇಕು ಎನ್ನುವ ಅಭಿಪ್ರಾಯಗಳು ವಿಧಾನಸೌಧದ ಒಳಗೆ ಹಾಗೂ ಹೊರಗೂ ಕೇಳಿಬಂದವು. ಸಾಂಕ್ರಾಮಿಕ ರೋಗ ಸಮುದಾಯಕ್ಕೆ ವ್ಯಾಪಿಸಿದ್ದು, ಸಾವು-ನೋವುಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಇನ್ನಷ್ಟು ಜಾಗ್ರತೆ ವಹಿಸಿ ಬಿಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕರನೇಕರು ಆಗ್ರಹಿಸಿದರು.
ಕರೊನಾ ಜತೆಗೆ ಬದುಕಬೇಕು ಎಂದು ಹೇಳಿದ್ದೆ ತಡ, ಜನರು ಮಾಸ್ಕ್ ಹಾಕಿಕೊಳ್ಳಬೇಕು. ಸ್ಯಾನಿಟೈಜೇಶನ್ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವುದನ್ನು ಮರೆತಿದ್ದಾರೆ. ಇದೇ ರೀತಿ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು. ಸದನದಲ್ಲಿ ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ಕುಮಾರ್ ಮಾತನಾಡಿ, ಕರೊನಾ ಇಷ್ಟೊಂದು ಪ್ರಮಾಣದಲ್ಲಿ ಹರಡುತ್ತಿರುವ ಕಾರಣ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದರು.
ಸದನದ ಹೊರಗೆ ಮಾತನಾಡಿದ ಶಾಸಕ ರಾಮಲಿಂಗಾರೆಡ್ಡಿ, ಲಾಕ್ಡೌನ್ ಅವಧಿಯಲ್ಲಿ ಪರಿಪಾಲನೆ ಮಾಡಿಕೊಂಡು ಬಂದ ನಿಯಮಾವಳಿಯನ್ನು ಜನರು ಮರೆತಿದ್ದಾರೆ. ಜನರಿಗೆ ಜವಾಬ್ದಾರಿ ನೆನಪಿಸಲು ಮತ್ತೆ ಕಟ್ಟುನಿಟ್ಟಿನ ಕ್ರಮ ಅಗತ್ಯ ಎಂದರು. ಶಾಸಕ ಎಂ.ಬಿ.ಪಾಟೀಲ್ ಮಾತನಾಡಿ, ನಾನು ವೈದ್ಯಕೀಯ ಕಾಲೇಜು ನಡೆಸುತ್ತಿದ್ದು ಈಗಿನ ಸ್ಥಿತಿ ನೋಡಿದರೆ ಪರಿಸ್ಥಿತಿ ಇನ್ನೂ ಗಂಭೀರವಾಗುವ ಆತಂಕ ಎದುರಾಗಿದೆ. ಲಾಕ್ಡೌನ್ ಅನಿವಾರ್ಯತೆ ಮತ್ತೆ ಕಾಣುತ್ತಿದೆ ಎಂದರು.