ಮನೆಯವರಿಂದಲೇ ಸೋಂಕಿತನ ಅಂತ್ಯಸಂಸ್ಕಾರ!

Funeral
Published on

ಕುಣಿಗಲ್: ತಾಲೂಕು, ಜಿಲ್ಲಾಡಳಿತದ ಬೇಜವಾಬ್ದಾರಿಯಿಂದಾಗಿ ಕರೊನಾಕ್ಕೆ ಬಲಿಯಾದ ವೃದ್ಧನ ಅಂತ್ಯಸಂಸ್ಕಾರವನ್ನೂ ಸಂಬಂಧಿಕರೇ ನೆರವೇರಿಸಿದ್ದಾರೆ ಎನ್ನಲಾಗಿದ್ದು ಈ ಸಂದರ್ಭದಲ್ಲಿ ನೂರಾರು ಜನರು ಭಾಗಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಎಡೆಯೂರು ಹೋಬಳಿ ತಿಮ್ಮೇಗೌಡನ ಪಾಳ್ಯದಲ್ಲಿ ಕೋವಿಡ್-19 ಮಾರ್ಗಸೂಚಿ ಅನ್ವಯ ಮೃತ ಸೋಂಕಿತರ ಅಂತ್ಯಸಂಸ್ಕಾರವನ್ನು ‘ಡೆತ್​ಬಾಡಿ ಮ್ಯಾನೇಜ್ಮೆಂಟ್’ ತಂಡದ ಮಾರ್ಗದರ್ಶನದಲ್ಲಿ ಮಾಡಬೇಕಿತ್ತು. ಆದರೆ, ಸಂಬಂಧಿಕರೇ ಬುಧವಾರ ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಸಂಬಂಧಪಟ್ಟವರ ಈ ಎಡವಟ್ಟು, ಆಡಳಿತದ ನಿರ್ಲಕ್ಷ್ಯಂದಾಗಿ ಸೋಂಕು ಹರಡುವ ಭೀತಿ ಆರಂಭವಾಗಿದೆ.

ಮೃತ ಸೋಂಕಿತ ಹಾಗೂ ಆತನ ಪತ್ನಿ ಕಳೆದ ವಾರ ಬೆಂಗಳೂರಿನ ಸಂಬಂಧಿಕರೊಬ್ಬರ ಶವ ಸಂಸ್ಕಾರಕ್ಕೆ ಹೋಗಿದ್ದರು. ಅಲ್ಲಿಂದ ಬಂದ ಬಳಿಕ ಕರೊನಾ ಪರೀಕ್ಷೆಗೆ ಒಳಗಾಗಿದ್ದರು. ಆದರೆ, ವರದಿ ಬರುವ ಮುನ್ನವೇ ಜೂ.30ರ ರಾತ್ರಿ ವೃದ್ಧ ಮೃತಪಟ್ಟಿದ್ದಾನೆ. ಜು.1ರಂದು ಬೆಳಗ್ಗೆ ಆತನಿಗೆ ಸೋಂಕು ದೃಢಪಟ್ಟಿದೆ. ಆದರೆ, ಮುಂಜಾಗ್ರತಾ ಕ್ರಮವಾಗಿ ವರದಿ ಬರುವವರೆಗೆ ಮೃತದೇಹವನ್ನು ವಶಕ್ಕೆ ತೆಗೆದುಕೊಂಡು ಸುರಕ್ಷತಾ ಕ್ರಮಕೈಗೊಳ್ಳಬೇಕಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ಪಿಪಿಇ ಕಿಟ್​ಗಳನ್ನು ಮೃತನ ಸಂಬಂಧಿಕರಿಗೇ ನೀಡಿ ಅವರ ಕೈಯಲ್ಲೇ ಶವಸಂಸ್ಕಾರ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕರೊನಾ ಸೋಂಕಿತ ಮೃತನ ಶವಸಂಸ್ಕಾರದ ವೇಳೆ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಇರಲಿಲ್ಲ. ಕೋವಿಡ್ ಮಾರ್ಗಸೂಚಿಗಳ ಅನ್ವಯ ಅಂತ್ಯ ಸಂಸ್ಕಾರ ನೆರವೇರಿಲ್ಲ. ಸೋಂಕಿತ ವೃದ್ಧ ಕಗ್ಗೆರೆ, ಗೌಡಗೆರೆ, ಅಮೃತೂರು, ಕುಣಿಗಲ್ ತಾಲೂಕು ಕಚೇರಿ ಸೇರಿ ಹಲವೆಡೆ ಓಡಾಡಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. | ಲವ ವಕೀಲ ಕೋವಿಡ್ ನಿಯಮದಂತೆ ಶವ ಸಂಸ್ಕಾರ ಮಾಡಲಾಗಿದೆ. ಇಲಾಖೆಯಿಂದ ಯಾವುದೇ ಲೋಪವಾಗಿಲ್ಲ. ಮೃತನ ಹೆಂಡತಿ ಸೇರಿ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ ಒಂಭತ್ತು ಮಂದಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಜನರು ಉಹಾ-ಪೋಹಗಳಿಗೆ ಕಿವಿಗೊಡಬಾರದು. | ವಿ.ಆರ್.ವಿಶ್ವನಾಥ್ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net