10 ಸಾವಿರ ತಲುಪಿದ್ರೂ ಸರ್ಕಾರ ಸಿದ್ಧ: ಸೋಂಕು ನಿಯಂತ್ರಣ ಸಿದ್ಧತೆ ಬಗ್ಗೆ ಹೈಕೋರ್ಟ್​ಗೆ ಮಾಹಿತಿ

Lockdown Corona
Published on

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ ಅಂತ್ಯಕ್ಕೆ 10 ಸಾವಿರ ಕರೊನಾ ಪ್ರಕರಣಗಳು ಸಂಭವನೀಯ ಏರಿಕೆ ಅಂದಾಜಿನ ಮೇಲೆ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ಹೈಕೋರ್ಟ್​ಗೆ ಲಿಖಿತ ಹೇಳಿಕೆ ಸಲ್ಲಿಸಿದೆ. ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಲಾಕ್​ಡೌನ್ ಘೊಷಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಪೀಠ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲರಾದ ವಿಕ್ರಂ ಹುಯಿಲಗೋಳ ಲಿಖಿತ ಹೇಳಿಕೆ ಸಲ್ಲಿಸಿ, ಒಂದೊಮ್ಮೆ ರಾಜ್ಯದಲ್ಲಿ ಏಪ್ರಿಲ್ ಅಂತ್ಯದ ವೇಳೆಗೆ ಕರೊನಾ ಸೋಂಕಿತರ ಸಂಖ್ಯೆ 10 ಸಾವಿರ ತಲುಪಿದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ಯೋಜನೆ ರೂಪಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಸರ್ಕಾರ ರೂಪಿಸಿರುವ ಆಪತ್ಕಾಲೀನ ಯೋಜನೆ (ಕಂಟಿಂಜನ್ಸಿ ಪ್ಲಾ್ಯನ್) ಪ್ರಕಾರ ಸದ್ಯದ ಕೋವಿಡ್ ಕೇಸ್ ಲೋಡ್​ಗೆ ಅನುಗುಣವಾಗಿ ಎನ್-95 ಮಾಸ್ಕ್, 3 ಪದರದ ಮಾಸ್ಕ್, ಪಿಪಿಇ ಕಿಟ್​ಗಳು, ಸ್ಯಾನಿಟೈಸರ್​ಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಯೋಜನೆಯ ಅಂದಾಜಿನ ಪ್ರಕಾರ ಅವುಗಳ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಏಪ್ರಿಲ್ ಅಂತ್ಯಕ್ಕೆ 10 ಸಾವಿರ ಪ್ರಕರಣಗಳ ಅಂದಾಜು ಹಾಕಿಕೊಂಡು, ಅದಕ್ಕೆ ಅನುಗುಣವಾಗಿ ಸುರಕ್ಷತಾ ವಸ್ತುಗಳು ಮತ್ತು ಮೂಲ ಸೌಕರ್ಯಗಳನ್ನು ಒದಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕಂಟಿಂಜನ್ಸಿ ಪ್ಲಾ್ಯನ್ ಪ್ರಕಾರ 10 ಸಾವಿರ ಪ್ರಕರಣಗಳ ಅಂದಾಜಿನ ಮೇಲೆ ಸುರಕ್ಷತಾ ವಸ್ತುಗಳ ತಯಾರಿಕೆ ಹಾಗೂ ಖರೀದಿಗೆ ಸರ್ಕಾರ ಕಾರ್ಯೋನ್ಮುಖವಾಗಿದೆ. ಆದರೆ, ಸರ್ಕಾರದ ಲಿಖಿತ ಹೇಳಿಕೆಯಲ್ಲಿ ನೀಡಲಾಗಿರುವ ಅಂಕಿ-ಅಂಶಗಳನ್ನು

ಗಮನಿಸಿದರೆ, ಗಣನೀಯ ಕೊರತೆ ಕಂಡು ಬರುತ್ತಿದೆ. ದಿನಕ್ಕೆ 50 ಸಾವಿರ ಲೀಟರ್​ಗೂ ಅಧಿಕ ಸ್ಯಾನಿಟೈಸರ್ ಉತ್ಪಾದಿಸಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಇದು ನಿಜವೇ ಆಗಿದ್ದಲ್ಲಿ, ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ, ಸಾರ್ವಜನಿಕರು ಸೇರಿ ಅಗತ್ಯವಿರುವ ರಾಜ್ಯದ ಎಲ್ಲರಿಗೂ ಸಮ ಪ್ರಮಾಣದ ಹಂಚಿಕೆ ಮತ್ತು ಲಭ್ಯತೆಯನ್ನು ಸರ್ಕಾರ ಖಾತರಿಪಡಿಸಬೇಕು ಎಂದಿತು.

ಸರ್ಕಾರದ ಲಿಖಿತ ಹೇಳಿಕೆಯಲ್ಲೇನಿದೆ?

ಕರೊನಾ ತಪಾಸಣೆಗೆ 11 ಸರ್ಕಾರಿ ಹಾಗೂ 4 ಖಾಸಗಿ ಸೇರಿ ರಾಜ್ಯದಲ್ಲಿ 15 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಎರಡು ವಾರಗಳಲ್ಲಿ ಹೆಚ್ಚುವರಿ 5 ಲ್ಯಾಬ್ ಸ್ಥಾಪಿಸಲಾಗುವುದು. ವಿದೇಶಗಳಲ್ಲಿ ಸೋಂಕು ಹರಡುವಿಕೆಯ ಚಾಲ್ತಿ ಪ್ರಮಾಣ ವಿಶ್ಲೇಷಿಸಿ ಕಂಟಿಂಜನ್ಸಿ ಪ್ಲಾ್ಯನ್ ಸಿದ್ಧಪಡಿಸಲಾಗಿದೆ. ಇಟಲಿಯ ಒಂದು ನಗರದ ಪ್ರಮಾಣ ಆಧರಿಸಿ ಸಂಭವನೀಯ ಪ್ರಕರಣಗಳ ಒತ್ತಡ ಅಂದಾಜಿಸಲಾಗಿದೆ. ಕರೊನಾ ತಪಾಸಣೆ ಹಾಗೂ ಚಿಕಿತ್ಸೆಗೆ ಎಷ್ಟು ಐಸೋಲೇಷನ್ ಬೆಡ್, ವೆಂಟಿಲೇಟರ್ ಹಾಗೂ ಇತರ ಉಪಕರಣಗಳ ಅಗತ್ಯವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದ್ದು, ಅದಕ್ಕೆ ಅನುಗುಣವಾಗಿ 1,574 ವೆಂಟಿಲೇಟರ್​ಗಳ ಖರೀದಿಗೆ ಈಗಾಗಲೇ ಆದೇಶ ಮಾಡಲಾಗಿದೆ. ಕಂಟಿಂಜನ್ಸಿ ಪ್ಲಾ್ಯನ್ ಅಂದಾಜಿನ ಪ್ರಕಾರ 18.33 ಲಕ್ಷ ಎನ್-95 ಮಾಸ್ಕ್ ಪೂರೈಕೆಗೆ ಆದೇಶಿಸಲಾಗಿದ್ದು, 5,46,700 ಮಾಸ್ಕ್ ಈವರೆಗೆ ಸ್ವೀಕರಿಸಿಲಾಗಿದೆ. 10.05 ಲಕ್ಷ ಪಿಪಿಇ ಕಿಟ್​ಗಳ ಪೈಕಿ 1,82,600 ಸ್ವೀಕರಿಸಲಾಗಿದೆ. 49 ಲಕ್ಷ 3 ಪದರದ ಮಾಸ್ಕ್​ಗಳಲ್ಲಿ 37 ಲಕ್ಷ ಸ್ವೀಕರಿಸಲಾಗಿದೆ. ಈ ಮೊದಲು ರಾಜ್ಯದಲ್ಲಿ 11 ಫಾರ್ವಸ್ಯೂಟಿಕಲ್ ಕಂಪನಿಗಳು ಸ್ಯಾನಿಟೈಸರ್ ಉತ್ಪಾದಿಸುತ್ತಿವೆ. ಈಗ ಹೆಚ್ಚುವರಿಯಾಗಿ 77 ಕಂಪೆನಿಗಳಿಗೆ ಲೈಸೆನ್ಸ್ ನೀಡಲಾಗಿದೆ. ಇದರಿಂದ ಸ್ಯಾನಿಟೈಸರ್ ಉತ್ಪಾದನೆ ಪ್ರತಿ ದಿನಕ್ಕೆ 50 ಸಾವಿರ ಲೀಟರ್​ಗೂ ಅಧಿಕವಾಗಲಿದೆ. ಈ ಕಂಪನಿಗಳು ರಾಜ್ಯದ ಬೇಡಿಕೆಗೆ ತಕ್ಕಂತೆ ಸ್ಯಾನಿಟೈಸರ್ ಉತ್ಪಾದಿಸುವ ಜತೆಗೆ ಬೇರೆ ರಾಜ್ಯಗಳಿಗೂ ಸರಬರಾಜು ಮಾಡಲಿವೆ ಎಂದು ಸರ್ಕಾರ ತಿಳಿಸಿದೆ.

ಕರೊನಾ ಸೋಂಕಿತರ ಚಿಕಿತ್ಸೆಗೆ 5,665 ಹಾಸಿಗೆ ಮೀಸಲು

ಬೆಂಗಳೂರು: ಕರೊನಾ ವೈರಸ್ ಸಂಕಷ್ಟ ಕಾಲದಲ್ಲೇ ರಾಜ್ಯದಲ್ಲಿ ಹೊಸದಾಗಿ 14 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಸಾಂಕ್ರಾಮಿಕ ರೋಗಿಗಳು ಹಾಗೂ ಶಂಕಿತರ ಚಿಕಿತ್ಸೆಗೆ ಅನುಕೂಲವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ. ಕರೊನಾ ತಡೆಗಟ್ಟಲು ಲಾಕ್​ಡೌನ್ ಜತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ದಿನೇದಿನೆ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಅಗತ್ಯ ಸವಲತ್ತು ನೀಡುವುದರ ಜತೆಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಸೋಂಕಿತರ ಚಿಕಿತ್ಸೆಗಾಗಿ 5,665 ಹಾಸಿಗೆಗಳು, 372 ವೆಂಟಿಲೇಟರ್​ಗಳು, 801 ತೀವ್ರ ನಿಗಾ ಘಟಕಗಳ ಜತೆಗೆ ಅಗತ್ಯ ಸವಲತ್ತುಗಳನ್ನು ಕಲ್ಪಿಸಲಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ. ಬೆಂಗಳೂರು ಮಹಾನಗರ ಮಾತ್ರವಲ್ಲದೆ, ರಾಮನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ವೆಂಟಿಲೇಟರ್​ಗಳು, ತುರ್ತು ನಿಗಾ ಘಟಕಗಳಿವೆ. ರಾಮನಗರದಲ್ಲಿ ಕಂದಾಯ ಭವನವನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದ್ದು, 16 ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಿ, 3 ವೆಂಟಿಲೇಟರ್ ಅಳವಡಿಸಲಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net