

ಬೆಂಗಳೂರು: ಲಂಡನ್ನಿಂದ ಬೆಂಗಳೂರಿಗೆ ಆಗಮಿಸಿದ್ದ ಯುವತಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತೆ ವಿಕ್ಟೋರಿಯಾ ಆಸ್ಪತ್ರೆ ಆವರಣದ ನೆಫ್ರೋ ಯುರಾಲಜಿ ಸಂಸ್ಥೆಗೆ ಭೇಟಿ ನೀಡಿದ್ದಳು ಎಂಬ ಮಾಹಿತಿ ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳಲ್ಲಿ ಆತಂಕ ಸೃಷ್ಟಿಸಿದೆ.
ಆಸ್ಪತ್ರೆಯ ನೆಫ್ರೋ ವಿಭಾಗದ ಮುಖ್ಯಸ್ಥ ಡಾ. ಉಮೇಶ್ ಸಂಬಂಧಿ ಯಾಗಿರುವ ಯುವತಿ ಮಾ. 14 ರಂದು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಡಾ. ಉಮೇಶ್ ಆಕೆಯನ್ನು ಆಸ್ಪತ್ರೆಯ ಹಲವು ವಿಭಾಗಗಳಿಗೂ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳು ಯುವತಿಯ ಸಂಪರ್ಕಕ್ಕೆ ಬಂದಿದ್ದಾರೆ. ವಿದೇಶದಿಂದ ಬಂದವರು 14 ದಿನ ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿ ಇರಬೇಕಿತ್ತು. ಆದರೆ ಈಕೆ ಆಸ್ಪತ್ರೆ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡಿದ್ದಾರೆ.
ಇನ್ನು ಯುವತಿಯ ಜತೆ ಪ್ರಥಮ ಸಂಪರ್ಕ ಹೊಂದಿದ್ದ ಡಾ. ಉಮೇಶ್, ನಂತರ ಆಸ್ಪತ್ರೆ ನಿರ್ದೇಶಕ ಡಾ. ಕೇಶವಮೂರ್ತಿ, ರೇಡಿಯಾಲಜಿಸ್ಟ್ ಡಾ. ರಾಮಲಿಂಗಯ್ಯ ಜತೆ ಸಭೆಯಲ್ಲಿ ಭಾಗಿಯಾಗಿದ್ದಾರೆ. ಯುವತಿಗೆ ಸೋಂಕು ದೃಢ ಪಟ್ಟ ಮಾಹಿತಿ ಹೊರಬರುತ್ತಲೇ ಈ ಮೂವರು ವೈದ್ಯರು ನಾಪತ್ತೆಯಾಗಿದ್ದಾರೆ. ಇದರಿಂದ ಆಸ್ಪತ್ರೆಯ ವೈದ್ಯರು, ರೋಗಿಗಳು ಸೇರಿ ನಗರದ ಜನರಲ್ಲಿ ಆತಂಕ ಹೆಚ್ಚಾಗಿದೆ.
ವೈದ್ಯರಿಂದಲೇ ಅಸಮಾಧಾನ: ನೆಫ್ರೋ ಯುರಾಲಜಿ ಸಂಸ್ಥೆಗೆ ಕಿಡ್ನಿ ಸೋಂಕು, ಕಿಡ್ನಿ ವೈಫಲ್ಯದಿಂದ ಡಯಾಲಿಸಿಸ್ ಹಾಗೂ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆಂದು ನಿತ್ಯ ನೂರಾರು ಮಂದಿ ಬರುತ್ತಾರೆ. ಹೀಗಿರುವಾಗ ಈವರೆಗೂ ಆಡಳಿತಾಧಿಕಾರಿ ಹಾಗೂ ಸೋಂಕು ನಿಯಂತ್ರಕ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಆಸ್ಪತ್ರೆ ಸಿಬ್ಬಂದಿಯಿಂದಲೇ ಆಕ್ರೋಶ ವ್ಯಕ್ತವಾಗಿದೆ. ಇಡೀ ಆಸ್ಪತ್ರೆಯನ್ನೇ ಸ್ವಚ್ಛಗೊಳಿಸಬೇಕು. ಸಿಬ್ಬಂದಿ ಹಾಗೂ ರೋಗಿಗಳನ್ನು ತಪಾಸಣೆಗೆ ಒಳಪಡಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ವೈದ್ಯರ ಈ ಬೇಜವಾಬ್ದಾರಿ ವರ್ತನೆಗೆ ವೈದ್ಯರಿಂದಲೇ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.