

ಗದಗ: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನಿಗೆ ಹೃದಯಾಘಾತ ಆಗಿರಬಹುದೆಂದು ಆತನ ಬಾಯಿಗೆ ಬಾಯಿ ಇಟ್ಟು ಉಸಿರು ನೀಡಿದ್ದಲ್ಲದೇ, ಆತನ ಕಿರುನಾಲಿಗೆಯನ್ನು ತಿಕ್ಕಿದ ಜನರಿಗೆ ಇದೀಗ ಭಾರೀ ಆತಂಕ ಎದುರಾಗಿದೆ.
ಗದಗ ತಾಲೂಕಿನ ಸೀತಾಲಹರಿ ಗ್ರಾಮದಲ್ಲಿ ಆತಂಕಕಾರಿ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಹಾಗೂ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರು ತೀವ್ರ ಜ್ವರದಿಂದ ಬಳಲಿ ಜುಲೈ 9ರಂದು ಚಾಲಕ ಸಾವಿಗೀಡಾಗಿದ್ದಾರೆ. ಸಾವಿಗೂ ಮುನ್ನ ಚಾಲಕನಿಗೆ ಉಸಿರಾಟದ ತೊಂದರೆ ಎದುರಾಗಿತ್ತು. ಆತನಿಗೆ ಹೃದಯಾಘಾತ ಆಗಿರಬಹುದೆಂದು ತಿಳಿದ ಜನರು ಬಾಯಿಗೆ ಬಾಯಿ ಹಾಕಿ ಉಸಿರು ನೀಡಿದ್ದಾರೆ. ಅಲ್ಲದೆ, ಕಿರು ನಾಲಿಗೆಯನ್ನು ಬರಿಗೈನಿಂದ ತಿಕ್ಕಿ ಸಾವಿಗು ಮುನ್ನ ಆತನನ್ನು ಉಳಿಸಲು ಹರಸಾಹಸಪಟ್ಟಿದ್ದಾರೆ.
ಇನ್ನು ಜ್ವರದಿಂದ ಬಳಲುತ್ತಿದ್ದ ಚಾಲಕ ಗದಗದ ಜಿಮ್ಸ್ ಆಸ್ಪತ್ರೆಗೆ ಹೋಗಿ ಕೊವಿಡ್ ಟೆಸ್ಟ್ ಮಾಡಿಸಿ ಮರಳಿ ಊರಿಗೆ ಬಂದಿದ್ದರು. ಆದರೆ, ವರದಿ ಬರುವ ಮುನ್ನವೇ ಸಾವಿಗೀಡಾಗಿದ್ದಾರೆ. ಇದೀಗ ಬಂದಿರುವ ವರದಿಯಲ್ಲಿ ಪಾಸಿಟಿವ್ ಇರುವುದು ಪ್ರಾಥಮಿಕ ಸಂಪರ್ಕದಲ್ಲಿದ್ದವರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಸುಮಾರು 60 ಜನರನ್ನು ಮೊರಾರ್ಜಿ ವಸತಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಅಂದಹಾಗೆ ಬಸ್ ಚಾಲಕ ಲಾಕ್ಡೌನ್ ಸಮಯದಲ್ಲಿ ಊರಿಗೆ ಬಂದಿದ್ದ. ಆತನ ಜತೆಗೆ ಕೆಲವರು ಸಮಯ ಕಳೆಯಲು ಇಸ್ಪೀಟು ಆಡುತ್ತಿದ್ದರು. ಸುಮಾರು ಒಂದು ಸಾವಿರ ಜನಸಂಖ್ಯೆ ಇರುವ ಸೀತಾಲಹರಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. (ಏಜೆನ್ಸೀಸ್)