ಮಡಿಕೇರಿ ದಸರಾಗೂ ಕರೊನಾ ಕರಿನೆರಳು: ಸರಳ ರೀತಿಯಲ್ಲಿ ಆಚರಣೆ

Dasara
Published on

ಮಡಿಕೇರಿ: ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿಯ ಮಡಿಕೇರಿ ದಸರಾ ಹಬ್ಬವನ್ನು ಸರ್ಕಾರ ಮತ್ತು ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಅತ್ಯಂತ ಸರಳ ರೀತಿಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲು ದಶಮಂಟಪಗಳು ಮತ್ತು ಕರಗ ಸಮಿತಿಗಳು ನಿರ್ಧರಿಸಿದೆ. ಸಾರ್ವಜನಿಕರು ಸಹಕಾರ ನೀಡಬೇಕೆಂದು ದಶಮಂಟಪ ಸಮಿತಿ ಅಧ್ಯಕ್ಷ ಬಿ.ಗುರುರಾಜ್ ಮನವಿ ಮಾಡಿದ್ದಾರೆ.

ಸಂಪ್ರದಾಯದಂತೆ ಬನ್ನಿ ಕಡಿಯುವ ಧಾರ್ಮಿಕ ವಿಧಿ ವಿಧಾನ ನಡೆಯಲಿದೆ. ಜಿಲ್ಲಾಡಳಿತದ ಸೂಚನೆಯಂತೆ ಒಂದು ಪಿಕ್‍ಅಪ್ ವಾಹನ ಅಥವಾ ಮುಂಭಾಗದ ಟ್ಯಾಕ್ಟರ್ ಇಂಜಿನ್ ನಲ್ಲಿ ಕಳಶ ಮತ್ತು ದೇವರ ಮೂರ್ತಿಯನ್ನಿಟ್ಟು ಬನ್ನಿ ಮಂಟಪಕ್ಕೆ ತೆರಳಲು ಮಂಟಪ ಸಮಿತಿಗಳು ನಿರ್ಧರಿಸಿವೆ ಎಂದು ತಿಳಿಸಿದ್ದಾರೆ.

ವಿಜದಶಮಿಯಂದು ಯಾವುದೇ ರೀತಿಯ ಮಂಟಪಗಳ ಪ್ರದರ್ಶನ ಹಾಗೂ ಬಹುಮಾನಕ್ಕೆ ಅವಕಾಶ ಇರುವುದಿಲ್ಲ. ಅತ್ಯಂತ ಸರಳ ರೀತಿಯಲ್ಲಿ ಹತ್ತು ಮಂಟಪ ಸಮಿತಿಗಳು ಕಳಶ ಮತ್ತು ನಾಲ್ಕು ಶಕ್ತಿ ದೇವತೆಗಳು ಕರಗದೊಂದಿಗೆ ಬನ್ನಿ ಮಂಟಪಕ್ಕೆ ತೆರಳಿ ಸಂಪ್ರದಾಯದಂತೆ ಬನ್ನಿ ಕಡಿಯುವ ಮೂಲಕ ದಸರಾ ಹಬ್ಬಕ್ಕೆ ತೆರೆ ಎಳೆಯಲಾಗುವುದು.

ಕರಗ ಮತ್ತು ಕಳಶದೊಂದಿಗೆ ಸಾಗುವ ಮಂಟಪ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಅ.24 ರಂದು ಕಾವೇರಿ ಕಲಾಕ್ಷೇತ್ರದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಉಚಿತ ಪರೀಕ್ಷೆ ನಡೆಯಲಿದೆ. ಕೋವಿಡ್ ಪರೀಕ್ಷಾ ವರದಿ ತರುವುದು ಕಡ್ಡಾಯ. ಕಳಶ ಕೊಂಡೊಯ್ಯುವಾಗ ಒಂದು ದೇವಾಲಯದಿಂದ 20 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ.

ಕರಗ ಹಾಗೂ ಕಳಶ ಸಾಗುವ ಮುಖ್ಯ ಬೀದಿಗಳಲ್ಲಿ ಹೆಚ್ಚುವರಿ ವಿದ್ಯುತ್ ದೀಪದ ಬೆಳಕಿನ ವ್ಯವಸ್ಥೆ ಜಿಲ್ಲಾಡಳಿತ, ನಗರಸಭೆ ಮತ್ತು ದಸರಾ ಸಮಿತಿ ಮಾಡಬೇಕು.

ಕೋವಿಡ್ ಸಂಕಷ್ಟದ ಪರಿಸ್ಥಿತಿ ಇರುವುದರಿಂದ ದಸರಾಕ್ಕಾಗಿ ಸಾರ್ವಜನಿಕರಿಂದ ಯಾವುದೇ ವಂತಿಕೆ ಸಂಗ್ರಹಿಸಲು ಸಾಧ್ಯವಾಗು ತ್ತಿಲ್ಲ. ಆದ್ದರಿಂದ ಜಿಲ್ಲಾಡಳಿತ ಹಾಗೂ ದಸರಾ ಸಮಿತಿ ಸರ್ಕಾರದಿಂದ ಬರುವ ಅನುದಾನವನ್ನು ವಿಜಯದಶಮಿಯೊಳಗೆ ಆಯಾ ದೇವಾಲಯಗಳ ಮಂಟಪ ಮತ್ತು ಕರಗ ಸಮಿತಿಗಳಿಗೆ ನೀಡಬೇಕೆಂದು ಕೋರಿದ್ದಾರೆ.

ಆರೋಗ್ಯದ ಸುರಕ್ಷತೆಯ ದೃಷ್ಟಿ ಯಿಂದ ಸರ್ಕಾರ ಮತ್ತು ಜಿಲ್ಲಾಡಳಿತ ನೀಡಿರುವ ಮಾರ್ಗಸೂಚಿ ಪಾಲಿಸುವುದು ದಶಮಂಟಪ ಸಮಿತಿಗಳಿಗೆ ಅನಿವಾರ್ಯವಾಗಿದೆ ಎಂದು ಗುರುರಾಜ್ ಹೇಳಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net