ಕರೊನಾದಿಂದಾಗಿ ವಾಣಿಜ್ಯ ವಹಿವಾಟು ಅಸ್ತವ್ಯಸ್ತ; ಕೈಗಾರಿಕಾ ವಲಯಕ್ಕೆ ಭಾರಿ ನಷ್ಟ

BNG
Published on

ಬೆಂಗಳೂರು: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕರೊನಾ ವೈರಸ್ ಬೆಂಗಳೂರನ್ನೂ ಸ್ತಬ್ಧಗೊಳಿಸಿದೆ. ನಗರದ ಪ್ರಮುಖಭಾಗ ಗಾಂಧಿನಗರ ಸೇರಿ ವಾಣಿಜ್ಯ ಪ್ರದೇಶಗಳು ಜನರಿಲ್ಲದೆ ಭಣಗುಡುತ್ತಿವೆ.

15 ದಿನಗಳ ಹಿಂದೆ ಚೀನಾ, ಇಟಲಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತಿತ್ತು. ಮಾ. 8ರಂದು ಬೆಂಗಳೂರಿನಲ್ಲಿ ಕರೊನಾ ಸೋಂಕಿತ ಮೊದಲ ವ್ಯಕ್ತಿ ಪತ್ತೆಯಾದ ನಂತರ ಇಲ್ಲೂ ಸೋಂಕಿತರ ಲೆಕ್ಕ ಹಾಕಲಾಗುತ್ತಿದ್ದು, ದಿನದಿಂದ ದಿನಕ್ಕೆ ಸಂಖ್ಯೆ ಹೆಚ್ಚುತ್ತಲೇ ಇದೆ. ಪರಿಣಾಮ ರಾಜಧಾನಿ ಬೆಂಗಳೂರಿನಲ್ಲಿ ಜನ ಸಂಚಾರ ಕಡಿಮೆಯಾಗಿದ್ದು, ಬಹುತೇಕ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಕೈಗಾರಿಕಾ ಉತ್ಪಾದನೆ, ಎಪಿಎಂಸಿಗಳಲ್ಲಿ ಮಾರಾಟ, ಚಿಲ್ಲರೆ ವ್ಯಾಪಾರಿಗಳ ವಹಿವಾಟಿಗೂ ಹೊಡೆತ ಬಿದ್ದಿದೆ.

ಶೇ.70 ಕೈಗಾರಿಕೆಗಳು ಸ್ಥಗಿತ: ಪೀಣ್ಯ, ರಾಜಾಜಿನಗರ, ದೊಡ್ಡನೆಕ್ಕುಂದಿ ಸೇರಿ 10 ಕೈಗಾರಿಕಾ ಪ್ರದೇಶಗಳಲ್ಲಿ 30 ಸಾವಿರಕ್ಕೂ ಹೆಚ್ಚಿನ ಬೃಹತ್, ಮಧ್ಯಮ ಕೈಗಾರಿಕೆಗಳು, 1 ಲಕ್ಷಕ್ಕೂ ಅಧಿಕ ಸಣ್ಣ, ಅತಿಸಣ್ಣ ಕೈಗಾರಿಕೆಗಳಿವೆ. ವಾರ್ಷಿಕ 2 ಲಕ್ಷ ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡೆಯುತ್ತಿದೆ. ಕಳೆದ ಒಂದು ವಾರದಿಂದ ಶೇ.70 ಕೈಗಾರಿಕೆಗಳು ಕಾರ್ಯ ನಿರ್ವಹಿಸಿಲ್ಲ. ಕಚ್ಛಾ ವಸ್ತುಗಳ ಆಮದು ಮತ್ತು ಉತ್ಪಾದನೆಯ ರಫ್ತು ಕೂಡ ಸ್ಥಗಿತಗೊಂಡಿದ್ದು, ನಗರದ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಚಿಲ್ಲರೆ ವ್ಯಾಪಾರಕ್ಕೂ ಸಂಕಷ್ಟ: ಬೆಂಗಳೂರಿನಲ್ಲಿ 10 ಲಕ್ಷಕ್ಕೂ ಹೆಚ್ಚಿನ ಚಿಲ್ಲರೆ ವ್ಯಾಪಾರಿಗಳಿದ್ದಾರೆ. ಆಹಾರ ಉತ್ಪನ್ನ, ದಿನ ಬಳಕೆ ವಸ್ತು, ನಿರ್ಮಾಣ ವಸ್ತು ಮಾರಾಟ ನಡೆಸುತ್ತಿದ್ದ ಈ ವ್ಯಾಪಾರಿಗಳಿಂದಲೇ ವಾರ್ಷಿಕ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ವಹಿವಾಟು ನಡೆಯುತ್ತಿತ್ತು. ಈಗ ಇವರಿಗೂ ಸಂಕಷ್ಟ ಎದುರಾಗಿದೆ.

ಗಾಂಧಿನಗರ ಸ್ತಬ್ಧ: ರಾಜಧಾನಿಯ ಹೃದಯ ಭಾಗ ಗಾಂಧಿನಗರ, ಚಿಕ್ಕಪೇಟೆ, ಸುಭಾಷ್ ನಗರದಂತಹ ಪ್ರದೇಶಗಳಲ್ಲಿ ಬಂದ್ ವಾತಾವರಣ ಸೃಷ್ಟಿಯಾಗಿದೆ. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಮೆಜೆಸ್ಟಿಕ್ ಪ್ರದೇಶದಲ್ಲಿ ಮೌನ ಆವರಿಸಿದೆ. ಬಿಎಂಟಿಸಿ, ಕೆಎಸ್​ಆರ್​ಟಿಸಿ, ರೈಲ್ವೆ, ಮೆಟ್ರೋ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ನ್ಯಾಷನಲ್ ಮಾರ್ಕೆಟ್, ಸುಖಸಾಗರ್ ಮಾಲ್​ನಂತಹ ವ್ಯಾಪಾರಿ ಕಟ್ಟಡಗಳಲ್ಲೂ ಜನರಿಲ್ಲದೆ ವ್ಯಾಪಾರ ಕುಸಿದಿದೆ. ಒಟ್ಟಾರೆ ಕರೊನಾಗೆ ಸಿಲಿಕಾನ್ ಸಿಟಿ ಸ್ತಬ್ಧವಾಗಿದೆ.

ವೈರಸ್ ಪತ್ತೆ ಯಂತ್ರ ಅಳವಡಿಸಿ: ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಗರ ಜಿಲ್ಲೆ ವ್ಯಾಪ್ತಿಯ ಹೋಟೆಲ್ ಮತ್ತು ರೆಸಾರ್ಟ್​ಗಳಲ್ಲಿ ಕಡ್ಡಾಯವಾಗಿ ನಾನ್ ಕಾಂಟ್ಯಾಂಕ್ಟ್ ಇನ್ಪ್ರಾರೆಡ್ ಥಮೋಮೀಟರ್ ಯಂತ್ರ ಅಳವಡಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಆದೇಶಿಸಿದ್ದಾರೆ. ಯಂತ್ರದ ಮೂಲಕ ಹೋಟೆಲ್ ಅಥವಾ ರೆಸಾರ್ಟ್​ಗೆ ಬರುವವರನ್ನು ತಪಾಸಣೆಗೊಳಪಡಿಸಿ ಸೋಂಕಿತರನ್ನು ಪತ್ತೆ ಹಚ್ಚಬೇಕು ಎಂದು ಸೂಚಿಸಲಾಗಿದೆ.

ಬಿಕೋ ಎನ್ನುತ್ತಿವೆ ವಾಣಿಜ್ಯ ಪ್ರದೇಶಗಳು: ಗಾಂಧಿನಗರ ಮಾತ್ರವಲ್ಲ, ಎಂ.ಜಿ. ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಗಾಂಧಿಬಜಾರ್​ನಂತಹ ವಾಣಿಜ್ಯ ಪ್ರದೇಶಗಳಲ್ಲೂ ಜನ ಸಂಚಾರ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ವಾರಾಂತ್ಯದಲ್ಲಿ ಸಹಸ್ರಾರು ಸಂಖ್ಯೆಯ ಜನರಿಂದಲೇ ತುಂಬಿರುತ್ತಿದ್ದು. ಆದರೆ, ಕಳೆದ ಒಂದು ವಾರದಿಂದ ಈ ಪ್ರದೇಶಗಳು ಜನರಿಗೂ ಬರ ಎಂಬಂತಿವೆ. ಕರೊನಾ ಭೀತಿಯಿಂದಾಗಿ ಬಹುತೇಕ ಸಾರ್ವಜನಿಕರು ಮನೆಗಳಿಂದ ಹೊರ ಬರುತ್ತಿಲ್ಲ. ಕೆಲವರು ಈಗಾಗಲೇ ಬೆಂಗಳೂರು ತೊರೆದು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.

ಆಟೋ, ಕೂಲಿಯವರಿಗೂ ನಷ್ಟ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ಕೂಲಿಯವರಿಗೆ ಲಗೇಜ್​ಗಳನ್ನು ಕೊಂಡೊಯ್ಯುವ ಕೆಲಸ ಸಿಗುತ್ತಿಲ್ಲ. ಈ ಕೂಲಿಯನ್ನೇ ಆಶ್ರಯಿಸಿದ್ದ ನೂರಾರು ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇನ್ನು ಆಟೋ ಚಾಲಕರಿಗೂ ಪ್ರಯಾಣಿಕರಿಲ್ಲದೆ ಸಂಪಾದನೆ ಆಗುತ್ತಿಲ್ಲ. ನಗರದಲ್ಲಿನ 1.2 ಲಕ್ಷ ಆಟೋಗಳಲ್ಲಿ ಶೇ.30 ಆಟೋ ಸಂಚಾರ ಸ್ಥಗಿತಗೊಂಡಿದೆ.

ಪ್ರಯಾಣಿಕ ರಿಂದಲೇ ತುಂಬಿರು ತ್ತಿದ್ದ ಕೆಎಸ್​ಆರ್ ರೈಲು ನಿಲ್ದಾಣ ಈಗ ಬಿಕೋ ಎನ್ನುತ್ತಿದೆ. ನಮಗೀಗ ಕೂಲಿಯೂ ಸಿಗದೆ ಬದುಕು ಸಾಗಿಸುವುದೇ ದುಸ್ತರವಾಗಿದೆ. | ರಮೇಶ್ ರೈಲ್ವೆ ಕೂಲಿ ಈಗಾಗಲೇ ವ್ಯಾಪಾರವಿಲ್ಲದೆ ಆರ್ಥಿಕ ಸಮಸ್ಯೆ ಎದುರಾಗಿದೆ. ಇನ್ನೂ ಕೆಲ ದಿನ ಇದೇ ಪರಿಸ್ಥಿತಿ ಮುಂದುವರಿದರೆ ಅಂಗಡಿ ಮುಚ್ಚಿ ಮನೆಯಲ್ಲಿ ಕೂರಬೇಕು. | ಕೈಲಾಶ್ ಚಿಲ್ಲರೆ ವ್ಯಾಪಾರಿ ಕಚ್ಚಾ ವಸ್ತುಗಳ ಆಮದು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಉತ್ಪಾದನೆಯೂ ಇಲ್ಲದಂತಾಗಿದೆ. ನಗರದಲ್ಲಿನ ಶೇ. 70 ಕೈಗಾರಿಕೆಗಳು ವಾರದಿಂದ ಕಾರ್ಯನಿರ್ವಹಿಸಿಲ್ಲ. | ಜನಾರ್ದನ ಎಫ್​ಕೆಸಿಸಿಐ ಅಧ್ಯಕ್ಷ https://www.vijayavani.net/areca-rate-due-to-corona/ https://www.vijayavani.net/supplementary-estimation-of-the-3rd-installment/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net