

ಬೆಂಗಳೂರು: ಲಾಕ್ಡೌನ್ ಅವಧಿಯಲ್ಲಿ ಯಾರನ್ನೂ ಕೆಲಸದಿಂದ ತೆಗೆಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ. ದಿಗ್ವಿಜಯ ನ್ಯೂಸ್ 247 ಹಾಗೂ ವಿಜಯವಾಣಿ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಮಾತನಾಡಿ, ಖಾಸಗಿ ಮತ್ತು ಗಾರ್ವೆಂಟ್ಸ್ ಉದ್ಯಮ ಸೇರಿ ಯಾವುದೇ ಕಾರ್ವಿುಕರು ಸಂಕಷ್ಟಕ್ಕೆ ಸಿಲುಕುವುದಕ್ಕೆ ಬಿಡುವುದಿಲ್ಲ. ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು. ಕರೊನಾ ಹರಡುವಿಕೆ ತಡೆಯುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ. ಏ.20 ತನಕ ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ನೀಡಿರುವ ಸೂಚನೆ, ಆದೇಶಗಳನ್ನು ಜನರು ಕಟ್ಟುನಿಟ್ಟಾಗಿ ಪರಿಪಾಲನೆ ಮಾಡಿದರೆ, ಮುಂದಿನ ದಿನಗಳು ಆಶಾದಾಯಕವಾಗಿ ಇರಲಿವೆ ಎಂದು ಹೇಳಿದರು.
1.32 ಕೋಟಿ ಪಡಿತರ ಕಾರ್ಡ್: ರಾಜ್ಯದಲ್ಲಿ 6.30 ಕೋಟಿ ಜನರಿದ್ದು, 1.32 ಕೋಟಿ ಪಡಿತರ ಕಾರ್ಡ್ಗಳನ್ನು ನೀಡಿದ್ದೇವೆ. ಒಂದು ಕುಟುಂಬ ಅಂದರೆ 5 ಜನ ಲೆಕ್ಕ. ಅದರಂತೆ ಲೆಕ್ಕ ಹಾಕಿದರೆ ಬಹುತೇಕ ಎಲ್ಲರಿಗೂ ಪಡಿತರ ಸಿಕ್ಕುವ ವ್ಯವಸ್ಥೆ ಇದೆ. ಹೊಸದಾಗಿ ಅರ್ಜಿ ಹಾಕಿದ್ದ 2 ಲಕ್ಷ ಜನರಿಗೂ ಪಡಿತರ ನೀಡಲು ಸೂಚಿಸಲಾಗಿದೆ. ಆದ್ದರಿಂದ ಯಾರೂ ಈ ಬಗ್ಗೆ ಆತಂಕಪಟ್ಟುಕೊಳ್ಳುವ ಅತಗ್ಯವಿಲ್ಲ ಎಂದು ಕಾರಜೋಳ ಹೇಳಿದರು.
ರೈತರಿಗೆ ಬೀಜ ಮತ್ತು ಗೊಬ್ಬರ: ಲಾಕ್ಡೌನ್ ಸಂದರ್ಭದಲ್ಲಿಯೂ ರೈತರಿಗೆ ತೊಂದರೆ ಆಗದಂತೆ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಕೃಷಿ ಚಟುವಟಿಕೆ ಚಾಲನೆಯಲ್ಲಿ ಇರುವಂತೆ ನೋಡಿಕೊಳ್ಳಲು ಅವರಿಗೆ ಬೇಕಾಗಿರುವ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಸದ್ಯಕ್ಕಿಲ್ಲ ಕಾಮಗಾರಿ: ಲೋಕೋಪಯೋಗಿ ಇಲಾಖೆ ಸೇರಿ ಹಲವು ಇಲಾಖೆಗಳಿಂದ ನಡೆಯುತ್ತಿದ್ದ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಲಾಕ್ಡೌನ್ ಮುಗಿದ ಬಳಿಕ ಸಂಪುಟ ಸಭೆ ನಡೆಸಿ, ಮುಂದಿನ ತೀರ್ಮಾನ ತೆಗೆದುಕೊಂಡ ಬಳಿಕ ಕಾಮಗಾರಿ ನಡೆಯಲಿವೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.
ಮಂಗನ ಕಾಯಿಲೆ: ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆಗೆ ಜನರು ಬಲಿಯಾಗುತ್ತಿರುವ ಬಗ್ಗೆ ಸರ್ಕಾರ ಗಮನ ನೀಡಿದ್ದು, ಸೂಕ್ತ ಕ್ರಮ ಜರುಗಿಸಲಾಗಿದೆ. ಅಗತ್ಯವಿರುವ ಔಷಧ ಸೇರಿ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ಈ ಬಗ್ಗೆ ಸಚಿವರಾದ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಸಭೆಯೂ ನಡೆದಿದೆ ಎಂದರು. ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆ ಪ್ರಕರಣದಿಂದ ಮೈಸೂರು ಜಿಲ್ಲೆಯಲ್ಲಿ ಪಾಸಿಟಿವ್ ಕೇಸು ಹೆಚ್ಚಾಗಿದ್ದು, ಆ ಕಾರ್ಖಾನೆ ಮುಚ್ಚಿಸಬೇಕೆ? ಬೇಡವೇ? ಎನ್ನುವ ಚರ್ಚೆ ನಡೆದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ನೀಡುವ ವರದಿ ಪಡೆದು ಸಂಪುಟದಲ್ಲಿ ಚರ್ಚೆ ಮಾಡಿ ನಿರ್ಣಯಿಸಲಾಗುವುದು ಎಂದರು. ನೇಕಾರರು ಆತಂಕಪಟ್ಟುಕೊಳ್ಳುವ ಅಗತ್ಯವೇನಿಲ್ಲ. ಅವರು ನೇಯ್ದಿದ್ದದನ್ನು ಸರ್ಕಾರ ಈ ಹಿಂದೆಯೂ ಖರೀದಿ ಮಾಡಿದೆ. ಈಗಲೂ ಮಾಡಿದೆ. ಮುಂದೆಯೂ ಮಾಡಲಿದೆ ಎಂದು ಕಾರಜೋಳ ಭರವಸೆ ನೀಡಿದರು.
ದೂರು ಕೊಡಿ
ಲಾಕ್ಡೌನ್ ಸಂದರ್ಭ ಮನೆ ಬಾಡಿಗೆಗೆ ಬಲವಂತ ಮಾಡುವಂತಿಲ್ಲ ಎಂದು ಸರ್ಕಾರ ತಿಳಿಸಿದೆ. ಬಲವಂತ ಮಾಡಿದರೆ ದೂರು ನೀಡಬಹುದು. ಸರ್ಕಾರ ನೀಡಿರುವ ಸೂಚನೆಗಳನ್ನು ಪರಿಪಾಲಿಸದೆ ಹೋದರೆ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದ ಡಿಸಿಎಂ , ಕಾರ್ವಿುಕರಿಗೆ ಮತ್ತು ವಲಸಿಗರಿಗೆ ಹಾಸ್ಟೆಲ್ಗಳಲ್ಲಿಯೂ ನೆಲೆ ಕಲ್ಪಿಸಿಕೊಡಲಾಗಿದೆ. ಲಾಕ್ಡೌನ್ ಮುಗಿಯುವ ತನಕ ಒಂದೇ ಕಡೆ ನೆಲೆಯಾಗಿದ್ದರೆ, ಎಲ್ಲವೂ ಕಂಟ್ರೋಲ್ಗೆ ಬರಲಿದೆ. ವಸತಿ, ಆಹಾರ ಸೇರಿ ಯಾವುದಕ್ಕೂ ತೊಂದರೆ ಆಗದಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂದರು.