

ಬೆಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರು ಹಾಗೂ ಶಂಕಿತರನ್ನು ಈಗಿರುವ 14 ದಿನಗಳ ಬದಲಿಗೆ ಒಟ್ಟು 42 ದಿನಗಳ ದೀರ್ಘಾವಧಿ ಕ್ವಾರಂಟೈನ್‌ಗೆ ಒಳಪಡಿಸಲು ಬಿಬಿಎಂಪಿ ತೀರ್ಮಾನಿಸಿದೆ.
ವಿದೇಶದಿಂದ ಬಂದವರನ್ನು ಮೊದಲು 14 ದಿನಗಳವರೆಗೆ ಹೋಂ ಕ್ವಾರಂಟೈನ್ ಮಾಡಲಾಗುತ್ತಿತ್ತು. ಆದರೆ ಬೆಂಗಳೂರಿನಲ್ಲಿ 60 ಜನರಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ದೀರ್ಘಾವಧಿ ಕ್ವಾರಂಟೈನ್ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ಕ್ವಾರಂಟೈನ್ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ಸೋಂಕಿತರ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು 14 ದಿನ ಪಾಲಿಕೆ ನಿಗದಿಪಡಿಸಿದ ಸ್ಥಳದಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. 12ನೇ ದಿನ ಶಂಕಿತರ ಗಂಟಲುದ್ರವ ಮತ್ತಿತರ ಪರೀಕ್ಷೆಗಳನ್ನು ಮಾಡಲಾಗುತ್ತದೆ. ವರದಿಯಲ್ಲಿ ನೆಗೆಟಿವ್ ಬಂದರೆ ಅವರನ್ನು ಮನೆಗೆ ಕಳಿಸಲಾಗುತ್ತದೆ. ಜತೆಗೆ ಇನ್ನೂ 14 ದಿನ ಪಾಲಿಕೆ ನಿಗಾವಹಿಸಿ ಕ್ವಾರಂಟೈನ್ ಮಾಡಲು ಕ್ರಮವಹಿಸಲಾಗುತ್ತದೆ. ನಂತರ ಮುಂದಿನ 15 ದಿನಗಳವರೆಗೆ ವೈಯಕ್ತಿಕ ಕಾಳಜಿಯಲ್ಲಿ ಕ್ವಾರಂಟೈನ್‌ನಲ್ಲಿರುವಂತೆ ಸೂಚನೆ ನೀಡಲಾಗುತ್ತದೆ. ಒಟ್ಟಾರೆ ಒಬ್ಬ ವ್ಯಕ್ತಿಯನ್ನು 42 ದಿ ಕ್ವಾರಂಟೈನ್ ಮಾಡುವ ಮೂಲಕ ಕರೊನಾ ಸೋಂಕು ಹರಡುವ ಪ್ರಕ್ರಿಯೆ ತಡೆಯಲಾಗುತ್ತದೆ.
ಬೆಂಗಳೂರಿನಲ್ಲಿ ಈವರೆಗೆ ಒಟ್ಟು 68 ಪ್ರಕರಣಗಳಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಅದರಲ್ಲಿ 46 ಪ್ರಕರಣಗಳು ವಿದೇಶಗಳಿಂದ ವಾಪಸ್ ಬಂದವರು, 6 ಜನ ಪ್ರಾಥಮಿಕ ಸಂಪರ್ಕ ಹೊಂದಿದವರು ಹಾಗೂ 4 ಜನ ದೆಹಲಿಯ ತಬ್ಲಿ ಧಾರ್ಮಿಕ ಸಭೆಯಿಂದ ಬಂದವರು ಸೋಂಕಿತರಾಗಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಸಂಚರಿಸಿದ ಪ್ರದೇಶ ಹಾಗೂ ಪ್ರಾಥಮಿಕ ಸಂಪರ್ಕದ ಪ್ರದೇಶವನ್ನು ಹಾಟ್‌ಸ್ಪಾಟ್ ಎಂದು ಪರಿಗಣಿಸಿ ಜನರ ತಪಾಸಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ತಬ್ಲಿ ಸಭೆಯ ಶಂಕಿತರು ಮನೆಗೆ:
ದೆಹಲಿಯ ನಿಜಾಮುದ್ದೀನ್‌ನ ತಬ್ಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಬಂದ 148 ಜನರನ್ನು ಹಜ್ ಭವನದಲ್ಲಿ ಕ್ವಾರಂಟೈನ್ ಮಾಡಿ ತಪಾಸಣೆ ಒಳಪಡಿಸಲಾಗಿತ್ತು. ಅದರಲ್ಲಿ 4 ಜನರಿಗೆ ಮಾತ್ರ ಸೋಂಕು ದೃಢಪಟ್ಟಿದ್ದು, ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ನೆಗೆಟಿವ್ ಬಂದವರನ್ನು ಮನೆಗಳಿಗೆ ಕಳಿಸಲಾಗಿದೆ. ಮನೆಗೆ ಹೋದವರು ಕಡ್ಡಾಯವಾಗಿ ಮುಂದಿನ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಅನುಸರಿಸುವಂತೆ ಸೂಚನೆ ನೀಡಲಾಗಿದೆ.