ಕಳೆದೆರಡು ದಿನಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ: ಸಾವಿನ ಸಂಖ್ಯೆ 14ಕ್ಕೇರಿಕೆ, 104 ಮಂದಿ ಗುಣಮುಖ

Corona
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಹೆಮ್ಮಾರಿ ದಿನದಿಂದ ದಿನಕ್ಕೆ ಏರುತ್ತಿದ್ದು, ಸಮಾಧಾನಕರ ಸಂಗತಿಯೆಂದರೆ ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಇಂದು ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ.

ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 25 ಹೆಚ್ಚಳವಾಗಿದೆ. ಆದರೆ, ನಿನ್ನೆ 34 ಹಾಗೂ ಮೊನ್ನೆ 41 ಪ್ರಕರಣಗಳು ಒಂದೇ ದಿನದಲ್ಲಿ ಹೆಚ್ಚಳವಾಗಿತ್ತು. ಇಂದು ಕೂಡ ವೈರಸ್‌ ಇನ್ನೊಬ್ಬ ವ್ಯಕ್ತಿಯನ್ನು ಬಲಿ ಪಡೆದಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 14ಕ್ಕೆ ಏರಿದೆ. ಸೋಂಕಿತರ ಸಂಖ್ಯೆ 384 ಆಗಿದ್ದು, 104 ಮಂದಿ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಕರೊನಾ ಹಾಟ್​ಸ್ಟಾಟ್​ ನಂಜನಗೂಡಿನಲ್ಲಿ ಮತ್ತೆ 6 ಹೊಸ ಪ್ರಕರಣಗಳು ವರದಿಯಾಗಿದ್ದು, ಮೈಸೂರು ನಗರದಲ್ಲಿ 1 ಪ್ರಕರಣ ಸೇರಿ ಒಟ್ಟು 7 ಹೊಸ ಪ್ರಕರಣಗಳು ಧೃಡಪಟ್ಟಿವೆ. ಬಾಲಕೋಟೆಯಲ್ಲೂ ಕರೊನಾ ತಾಂಡವವಾಡುತ್ತಿದ್ದು, ಇಲ್ಲೂ ಸಹ 7 ಹೊಸ ಕೇಸ್​ಗಳು ದಾಖಲಾಗಿವೆ. ಉಳಿದಂತೆ ಬೆಂಗಳೂರು ನಗರ 3, ಕಲಬುರಗಿ 2, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ಮಂಡ್ಯ ಹಾಗೂ ವಿಜಯಪುರದಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ.

ಕರೊನಾ ಸೋಂಕು ತಡೆಗಟ್ಟಲು ಮಸೀದಿಯಲ್ಲಿ ಯಾವುದೇ ಸಭೆ, ಪ್ರಾರ್ಥನೆ ನಡೆಸದಂತೆ ಹಾಗೂ ಮೃತ ವ್ಯಕ್ತಿಗಳನ್ನು ದಫನ್‌ ಮಾಡಲು ಅನುಮತಿ ನೀಡದಂತೆ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯು ರಾಜ್ಯದ ಎಲ್ಲ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿರುತ್ತದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456

ಬೆಂಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net