

ಚಿಕ್ಕಮಗಳೂರು: ಹೊಲ – ತೋಟಗಳಿಂದ ಕಟಾವು ಆದ ಕೃಷಿ ಉತ್ಪನ್ನಗಳನ್ನು ನಗರಗಳಿಗೆ ಸಾಗಣೆ ಮಾಡಲು ಯಾವುದೇ ನಿರ್ಬಂಧವೂ ಇಲ್ಲ. ಜಿಲ್ಲಾ- ತಾಲ್ಲೂಕು ಕೇಂದ್ರದಲ್ಲಿ ನೆಲಸಿರುವ ಬೆಳೆಗಾರರು ಹಳ್ಳಿಗಳಲ್ಲಿರುವ ತೋಟಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಇಂಥವರ ಸಂಚಾರಕ್ಕೆ ಅಡ್ಡಿ ಮಾಡದಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಅಧ್ಯಯನ ಪ್ರವಾಸ ಮಾಡಿದ ನಂತರ ಅವರು ಜಿಲ್ಲಾ ಕೇಂದ್ರದಲ್ಲಿ ಜನಪ್ರತಿನಿಧಿಗಳು – ಅಧಿಕಾರಿಗಳು ಮತ್ತು ರೈತ ಮುಖಂಡರ ಸಭೆ ನಡೆಸಿ ಮತ್ತಷ್ಟು ಮಾಹಿತಿ ಸಂಗ್ರಹಿಸಿ ಮಾತನಾಡಿದರು.
ಕೃಷಿ ಚಟುವಟಿಕೆಗೆ ಪೂರಕವಾದ ಟ್ರಾಕ್ಟರ್ – ಟಿಲ್ಲರ್ – ಬೋರ್ ವೆಲ್ ರಿಪೇರಿ ಅಂಗಡಿಗಳು ತೆರೆದಿರಲು ಅನುಮತಿಯಿದೆ. ಇವರಿಗೆ ನಿರ್ಬಂಧ ಹೇರದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಆದರೆ ಜಿಲ್ಲೆಯಲ್ಲಿ ಸಂಚಾರಕ್ಕೆ ಪಾಸ್ ಪಡೆದಿರುವ ಕೆಲವರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಬೇಸಿಗೆ ಮಳೆ ನಂತರ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಇದಕ್ಕೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಇನ್ನಿತರ ಕೃಷಿ ಪರಿಕರಗಳ ದಾಸ್ತಾನಿನಲ್ಲಿ ಕೊರತೆ ಇಲ್ಲ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.