

ಬೆಂಗಳೂರು: ಲಾಕ್ ಡೌನ್ ಆದೇಶವಿದ್ದರೂ ಜನರು ಮಾತ್ರ ಅನಗತ್ಯವಾಗಿ ಹೊರ ಬರುತ್ತಿರುವುದು ನಗರದಲ್ಲಿ ಕಾಣುತ್ತಿದೆ. ಇಂತಹವರನ್ನು ಹೊರಹಾಕಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಮನೆಯಿಂದ ಆಚೆ ಬಂದಿದ್ದ ಯುವಕರನ್ನು ತಡೆದು ಹಿಮ್ಮೆಟ್ಟಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಸಂಜಯ ನಗರ ಭೂಪಸಂದ್ರದಲ್ಲಿ ಘಟನೆ ನಡೆದಿದೆ. ಈ ಸಂಬಂಧ ಇಬ್ಬರನ್ನು ಸಂಜಯ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭೂಪಸಂದ್ರ ಏರಿಯಾವೊಂದರಲ್ಲಿ ತಪಾಸಣೆ ಮಾಡುತ್ತಿದ್ದಾಗ ರಸ್ತೆಯಲ್ಲಿ ಹಲವು ಜನರನ್ನು ಇರುವುದನ್ನು ಕಂಡು ತಿಳುವಳಿಕೆ ಹೇಳಿ ಮನೆ ಹೋಗಿ ಎಂದು ಹೇಳಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ನೋಡು ನೋಡುತ್ತಿದ್ದಂತೆ ಪೊಲೀಸ್ ಕಾನ್ ಸ್ಟೇಬಲ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಸದ್ಯ ಹಲ್ಲೆ ನಡೆಸಿದ ಗುಂಪಿನ ಪೈಕಿ ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿ ಸಂಜಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.