

ಬೆಂಗಳೂರು: ಕರೊನಾ ವೈರಸ್ ಸೋಂಕಿತರ ಸಂಖ್ಯೆ 124ಕ್ಕೇರಿದ್ದು, ಒಂದೇ ದಿನ 14 ಹೊಸ ಪ್ರಕರಣಗಳು ಗುರುವಾರ ವರದಿಯಾಗಿವೆ. ಇಲ್ಲಿಯವರೆಗೆ ರಾಜ್ಯದಲ್ಲಿ ಮೂವರು ಮೃತಪಟ್ಟಿದ್ದು, 11 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿ 51, ಮೈಸೂರು 21, ದಕ್ಷಿಣ ಕನ್ನಡ 9, ಉತ್ತರ ಕನ್ನಡ 8, ಚಿಕ್ಕಬಳ್ಳಾಪುರ 7, ಕಲಬುರಗಿ 5, ಬಳ್ಳಾರಿ 4, ದಾವಣಗೆರೆ 3, ಉಡುಪಿ 3, ಧಾರವಾಡ 1, ಕೊಡಗು 1, ತುಮಕೂರು 1 ಹಾಗೂ ಬೀದರ್ನಲ್ಲಿ 10 ಸೋಂಕಿತ ಪ್ರಕರಣಗಳು ಕಂಡುಬಂದಿವೆ. ಬೆಂಗಳೂರಿನಲ್ಲಿ 9 ಮತ್ತು ಕಲಬುರಗಿಯಲ್ಲಿ ಇಬ್ಬರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಈ ನಡುವೆ, ಎಲ್ಲಿಯೂ ಆಹಾರ ಧಾನ್ಯದ ವಿತರಣೆಯಲ್ಲಿ ಅಡೆತಡೆ ಉಂಟಾಗದಂತೆ ಕ್ರಮ ವಹಿಸುವಂತೆ ಸರ್ಕಾರವು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಪಡಿತರ ವಿತರಣೆಯಲ್ಲಿ ಅಗತ್ಯವಿರುವ ಓಟಿಪಿ (ಒನ್ ಟೈಂ ಪಾಸ್‌ವರ್ಡ್) ಸಲ್ಲಿಸಲು ಎಲ್ಲೆಲ್ಲಿ ತೊಂದರೆ ಇದೆಯೋ, ಅಂಥ ಪ್ರದೇಶಗಳಲ್ಲಿ ಓಟಿಪಿ ಷರತ್ತನ್ನು ಸಡಿಲಗೊಳಿಸುವಂತೆ ಸೂಚನೆ ನೀಡಲಾಗಿದೆ.
ದೆಹಲಿಯ ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿರುವ ಎಲ್ಲರನ್ನೂ ಕಡ್ಡಾಯವಾಗಿ 14 ದಿನಗಳ ಕಾಲ ಸರ್ಕಾರದ ನಿಗದಿತ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸುವಂತೆ ಹಾಗೂ ಈ ಕೇಂದ್ರಗಳಲ್ಲಿ 14 ದಿನ ಪೂರೈಸಿದವರನ್ನು ಮುಂದಿನ 14 ದಿನಗಳವರೆಗೆ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿ ಇರಿಸುವಂತೆ ಸರ್ಕಾರ ಸೂಚಿಸಿದೆ. ಈ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ರಾಜ್ಯ ಆರೋಗ್ಯ ಇಲಾಖೆಯ ಉಚಿತ ಆರೋಗ್ಯ ಸಹಾಯವಾಣಿ 080-29711171 ಗೆ ಕರೆ ಮಾಡಿ ಸಂಪರ್ಕಿಸಬೇಕು.
ಕರೊನಾ ವೈರಸ್ ನಿಯಂತ್ರಣಕ್ಕೆ ಸ್ವ-ಇಚ್ಛೆಯಿಂದ ಟೆಲಿಮೆಡಿಸಿನ್ ಮುಖಾಂತರ ಸೇವೆ ಸಲ್ಲಿಸಲು ಬಯಸುವ ವೈದ್ಯರಿಗೆ ದೂರವಾಣಿ ಸಂಖ್ಯೆ 080 47192219ಗೆ ಮಿಸ್ಡ್ ಕಾಲ್ ನೀಡಲು ಅಥವಾ https://forms.gle/TPbU7eZgazdxG9gS9 ವೆಬ್‌ಸೈಟ್ ಮೂಲಕ ಸರ್ಕಾರಕ್ಕೆ ಸಹಾಯ ಮಾಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿದ್ದಾರೆ. ಕರೊನಾ ವೈರಸ್ ಸಹಾಯವಾಣಿ ಸಂಖ್ಯೆ 104 ಹಾಗೂ ಹೊಸ ಸಂಖ್ಯೆ 9745697456 .