

ಬೆಂಗಳೂರು: ಜನರ ಜೀವ, ಜೀವನಕ್ಕೆ ಅಡಚಣೆ ಉಂಟಾಗಬಾರದು. ಹಾಗೆಯೇ ಕರೊನಾ ವೈರಾಣು ಸೋಂಕು ಹರಡಬಾರದು. ಇವೆರಡರ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ನಿರ್ವಹಣೆಯಲ್ಲಿ ವೈಜ್ಞಾನಿಕ ಬದಲಾವಣೆಗಳನ್ನು ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತಮ್ಮ ನಿವಾಸದ ಬಳಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾ ಮೊದಲ ಹಾಗೂ ಎರಡನೇ ಅನುಭವದ ಆಧಾರದಲ್ಲಿ ಮೂರನೇ ಅಲೆ ನಿಯಂತ್ರಣ ನಿಟ್ಟಿನಲ್ಲಿ ಗಮನಹರಿಸಿದ್ದು, ತಜ್ಞರು ನಿರಂತರ ಶ್ರಮಿಸಿ ಸಹಕರಿಸುತ್ತಿದ್ದಾರೆ.
ಸೋಂಕು ಉಲ್ಬಣಿಸಿದ ನಂತರ ಹತೋಟಿಗೆ ಪ್ರಯತ್ನಿಸುವ ಬದಲಿಗೆ ಮುಂಜಾಗ್ರತಾ ಕ್ರಮಗಳಿಗೆ ಒತ್ತು ನೀಡಲಾಗುತ್ತದೆ. ಪ್ರಿವೆನ್ಷನ್ ಬೆಟರ್ ದೆನ್ ಕ್ಯೂರ್ ರೀತಿಯಲ್ಲಿ ಸರ್ಕಾರ ಮುತುವರ್ಜಿವಹಿಸಿದ್ದು, ವೈಜ್ಞಾನಿಕ ನಿಯಂತ್ರಣ ಹಾಗೂ ನಿರ್ವಹಣೆಗೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ವರ್ಷಪೂರ್ತಿ ಬಿಂಬಿಸುವ ಕಾರ್ಯಕ್ರಮ
ದೇಶದ 75ನೇ ಸ್ವಾತಂತ್ರ್ಯ ಮಹೋತ್ಸವ ಆಚರಿಸುವ ಸೌಭಾಗ್ಯ ಲಭಿಸಿದೆ. ಈ ಅವಧಿಯಲ್ಲಿ ದೇಶ ನಡೆದು ಬಂದ ದಾರಿ, ಸಾಗಬೇಕಾದ ದಾರಿ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಬೊಮ್ಮಾಯಿ ಸಲಹೆ ನೀಡಿದರು.
ದೇಶ ಹಲವಾರು ಸವಾಲುಗಳು ಮಧ್ಯೆ ಗುರುತರ ಸಾಧನೆಗಳನ್ನು ಮಾಡಿದೆ. ಪ್ರಗತಿ, ಯಶಸ್ಸಿನಲ್ಲಿ ಕರ್ನಾಟಕ ನೀಡಿದ ಕೊಡುಗೆ ಅಪಾರವಾಗಿದೆ. ನಾಡು, ನುಡಿ, ನೆಲ-ಜಲ, ಸಾಹಿತ್ಯ-ಸಂಸ್ಕೃತಿ, ಆಡಳಿತ, ತಂತ್ರಜ್ಞಾನ, ಉದ್ಯಮ-ವ್ಯವಹಾರ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಬಿಂಬಿಸುವ ಕಾರ್ಯಕ್ರಮ ವರ್ಷಪೂರ್ತಿ ನಡೆಯಲಿದ್ದು, ಕರೊನಾ ಮುನ್ನೆಚ್ಚರಿಕೆ ನಿಯಮಗಳ ಪಾಲನೆಯೊಂದಿಗೆ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.