

ಮಡಿಕೇರಿ: ಕರೊನಾ ವಿರುದ್ಧದ ಹೋರಾಟದಲ್ಲಿ ವೃತ್ತಿಪರತೆ ಮೆರೆದಿದ್ದಕ್ಕೆ ಮೊನ್ನೆಯಷ್ಟೇ ಮೈಸೂರು ಮೂಲದ ಡಾ.ಉಮಾ ಮಧುಸೂಧನ್ ಅವರಿಗೆ ಅಮೆರಿಕದಲ್ಲಿ ಗೌರವ ಸೂಚಿಸಲಾಗಿತ್ತು. ಇದೀಗ ಅದೇ ಗೌರವಕ್ಕೆ ಕೊಡಗಿನ ಪ್ರೀತಿ ಸುಬ್ರಮಣಿ ಎಂಬುವರು ಭಾಜನರಾಗಿದ್ದಾರೆ. ಈ ಮೂಲಕ ಕರ್ನಾಟಕದ ಇಬ್ಬರು ವೈದ್ಯರಿಗೆ ವಿಶೇಷ ಗೌರವ ಸಿಕ್ಕಿದೆ.
ಕೊಡಗಿನ ಪ್ರೀತಿ ಸುಬ್ರಮಣಿ ಎಂಬುವರು ಅಮೆರಿಕದ ಸೈಂಟ್ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ಕೋವಿಡ್-19 ವಿರುದ್ಧ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಜಿಲ್ಲೆಯ ಬಿರುನಾಣಿ ಗ್ರಾಮದ ಸುಬ್ರಮಣಿ ಎಂಬುವರ ಪತ್ನಿ ಹಾಗೂ ರಣಜಿ ಆಟಗಾರ ರಾಜಪ್ಪ ಅವರ ಪುತ್ರಿ.
ಮೈಸೂರಿನ ಉಮಾ ಹಾಗೂ ಪ್ರೀತಿ ಒಟ್ಟೊಟ್ಟಿಗೆ ಸೇವೆ ಸಲ್ಲಿಸುತ್ತಿದ್ದು, ಪೊಲೀಸ್, ಅಗ್ನಿಶಾಮಕದಳ ಸೇರಿದಂತೆ ಇವರಿಂದ ಚಿಕಿತ್ಸೆ ಪಡೆದು ಗುಣಮುಖರಾದವರು ಸಹ ವಿವಿಧ ವಾಹನಗಳ ಮೂಲಕ ಭಿತ್ತಿ ಫಲಕಗಳನ್ನು ಹಿಡಿದು ಗೌರವ ಸಲ್ಲಿಸಿದ್ದಾರೆ. ಸೈರನ್ ಮೊಳಗಿಸಿ ಕೈಬೀಸಿ ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. (ದಿಗ್ವಿಜಯ ನ್ಯೂಸ್)