

ತುಮಕೂರು: ಚೀನಾದಿಂದ ತುಮಕೂರಿಗೆ ಕಳೆದ 10 ದಿನಗಳ ಹಿಂದೆ ಆಗಮಿಸಿರುವ ವಿದ್ಯಾರ್ಥಿಯೋರ್ವನಿಗೆ ಕೊರೊನಾ ವೈರಸ್ ತಗುಲಿರುವ ಶಂಕೆಯುಂಟಾಗಿದ್ದು, ಆತನ ಮೇಲೆ ಆರೋಗ್ಯ ಇಲಾಖೆಯ ವಿಶೇಷ ವೈದ್ಯಕೀಯ ತಂಡ ನಿಗಾ ಇಟ್ಟಿದೆ.
ನಗರದ ಹನುಮಂತಪುರ ಮೂಲದ ವಿದ್ಯಾರ್ಥಿ ಚೀನಾದ ವುಹಾನ್ ನಗರದಿಂದ 700 ಕಿಮೀ ದೂರದಲ್ಲಿರುವ ಹ್ಯಾಂಗ್ಝೂ ಎಂಬಲ್ಲಿ ಮೂರು ವರ್ಷಗಳಿಂದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ. ವುಹಾನ್ನಲ್ಲಿ ವೈರಸ್ ಹರಡುತ್ತಿದ್ದಂತೆ ಆತ ತುಮಕೂರಿಗೆ ಆಗಮಿಸಿದ್ದ.
ಆದರೆ ತುಮಕೂರಿಗೆ ಬಂದಾಗಿನಿಂದ ಕೆಮ್ಮಿನಿಂದ ಬಳಲುತ್ತಿದ್ದ. ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿರುವ ವೈದ್ಯರು ಆತನ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳಿಸಿದ್ದಾರೆ.
ಇನ್ನೂ 28 ದಿನ ಮನೆಯಿಂದ ಹೊರಗೆ ಓಡಾಡದಂತೆ, ಜನರೊಂದಿಗೆ ಬೆರೆಯದಂತೆ ವೈದ್ಯರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅವನ ಮನೆಯಲ್ಲಿಯೇ ಪ್ರತ್ಯೇಕ ರೂಮಿನಲ್ಲಿ ಇರಿಸಲಾಗಿದೆ.