

ಬೆಂಗಳೂರು: ಜಾಗತಿಕವಾಗಿ ಭೀಕರತೆ ಸೃಷ್ಟಿಸಿರುವ ಮಹಾಮಾರಿ ಕರೊನಾ ವೈರಸ್ ಸೋಂಕು ರಾಜ್ಯಕ್ಕೂ ಕಾಲಿಟ್ಟು ಈಗಾಗಲೇ ಒಬ್ಬರನ್ನು ಬಲಿಪಡೆದುಕೊಂಡಿದೆ. ದಿನೇ ದಿನೇ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದ್ದು, ಇಂದು ಮತ್ತೊಂದು ಪ್ರಕರಣ ವರದಿಯಾಗಿದೆ.
ಈ ಬಗ್ಗೆ ಟ್ವೀಟ್ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ಖಚಿತಪಡಿಸಿದ್ದಾರೆ. ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಮೆಕ್ಕಾ ಪ್ರವಾಸದಿಂದ ಹಿಂತಿರುಗಿದ್ದ 32 ವರ್ಷದ ವ್ಯಕ್ತಿಯೊಬ್ಬರಿಗೆ ಕರೊನಾ ವೈರಸ್ ಸೋಂಕು ಧೃಡಪಟ್ಟಿದೆ. ಅವರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ನಾಗರಿಕರು ಯಾವುದೇ ಆತಂಕಕ್ಕೆ ಒಳಗಾಗಬೇಡಿ ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ಈ ಪ್ರಕರಣದಿಂದ ರಾಜ್ಯದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ 16ಕ್ಕೇರಿದ್ದು, ಜನರಲ್ಲಿ ಮತ್ತಷ್ಟು ಭೀತಿಯುಂಟುಮಾಡಿದೆ. ಇನ್ನು ದೇಶಾದ್ಯಂತ ಸೋಂಕಿತರ ಸಂಖ್ಯೆ 275ಕ್ಕೇರಿದ್ದು, ಓರ್ವ ಇಟಲಿ ಪ್ರಜೆ ಸೇರಿದಂತೆ 5 ಮಂದಿ ಬಲಿಯಾಗಿದ್ದಾರೆ.