ಸಹಜ ಸ್ಥಿತಿಯತ್ತ ರಾಜ್ಯ, ಜೂ.1ರಿಂದ ಹೋಟೆಲ್, ಲಾಡ್ಜ್ ಓಪನ್?

Lockdown
Published on

ಬೆಂಗಳೂರು: ದೇವಸ್ಥಾನ, ಚರ್ಚ್, ಮಸೀದಿ ತೆರೆಯುವ ಜತೆಗೆ ಹೋಟೆಲ್, ರೆಸ್ಟೋರೆಂಟ್, ವಸತಿಗೃಹ, ಮಾಲ್ ವಹಿವಾಟುಗಳ ಪುನರಾರಂಭಕ್ಕೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ರಾಜ್ಯದಲ್ಲಿ ಜೂ.1ರಿಂದ ಜನಜೀವನ, ವಹಿವಾಟು ಎಲ್ಲವೂ ಸಹಜ ಸ್ಥಿತಿಗೆ ಬರುತ್ತದೆ ಎಂಬ ಸುಳಿವನ್ನು ಸಿಎಂ ಯಡಿಯೂರಪ್ಪ ನೀಡಿದ್ದಾರೆ.

ನಾಲ್ಕನೇ ಹಂತದ ಲಾಕ್ ಡೌನ್ ಮುಗಿಯಲು ಇನ್ನೂ 3 ದಿನ (ಮೇ 31) ಬಾಕಿಯಿದ್ದು, ಬೇರೆ ಕ್ಷೇತ್ರಗಳಿಗೆ ಕೊಟ್ಟಂತೆ ನಮಗೂ ವಿನಾಯಿತಿ ನೀಡಿ ಸಂಕಷ್ಟ ಬಗೆಹರಿಸಿ ಎಂದು ಮುಖ್ಯಮಂತ್ರಿಗೆ ಅಹವಾಲು ಸಲ್ಲಿಸಿ ದುಂಬಾಲು ಬೀಳುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮಾಸ್ಕ್, ದೈಹಿಕ ಅಂತರ, ಸುರಕ್ಷತೆ ಹಾಗೂ ಶುಚಿತ್ವ ಕ್ರಮಗಳನ್ನು ಕಡ್ಡಾಯಗೊಳಿಸಿ ಎಲ್ಲ ಚಟುವಟಿಕೆಗಳನ್ನು ನಿರ್ಬಂಧ ಮುಕ್ತವಾಗಿಸಲು ರಾಜ್ಯ ಸರ್ಕಾರ ಆಸಕ್ತಿ ವಹಿಸಿದೆ.

ಸಿನಿಮಾ ಮಂದಿರ ಮತ್ತು ಮಾಲ್​ಗೆ ತಕ್ಷಣ ಅವಕಾಶ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಜತೆಗೆ ಲಾಕ್​ಡೌನ್ ಕೊನೆಯ ಹಂತದಲ್ಲಿ ಪ್ರಾಥಮಿಕ ಶಾಲೆ ಆರಂಭಿಸಲು ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.

ಕರೊನಾ ಜತೆಗೆ ಜೀವನ

ವಿಧಾನಸೌಧದ ಬಳಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇನ್ನು ಮುಂದೆ ಕರೊನಾ ಜತೆಗೆ ಜೀವನ ಸಾಗಿಸುವುದು, ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಹಲವಾರು ಚಟುವಟಿಕೆಗಳಿಗೆ ವಿನಾಯಿತಿ ನೀಡುವುದು ಕೇಂದ್ರದ ಒಪ್ಪಿಗೆ ಅವಲಂಬಿಸಿದೆ ಎಂದರು.

ಅನುಮತಿ ಸಿಕ್ಕರಷ್ಟೇ ಅವಕಾಶ

ಉದ್ಯಮ-ವಾಣಿಜ್ಯ ಚಟುವಟಿಕೆಗಳಿಗೆ ಪರವಾನಗಿ ನೀಡಿರುವ ಕಾರಣ ಕೆಲಸಗಾರರು, ಹೊರಗಿನಿಂದ ಬಂದು ಹೋಗುತ್ತಿರುವ ಜನರಿಗೆ ವಸತಿ, ಉಪಾಹಾರ, ಊಟದ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್, ಲಾಡ್ಜ್ ವಹಿವಾಟಿಗೆ ಅನುಮತಿ ನೀಡಲು ಕೇಂದ್ರಕ್ಕೆ ವಿನಂತಿಸಲಾಗಿದೆ ಎಂದು ಬಿಎಸ್​ವೈ ತಿಳಿಸಿದರು. ಮಾಲ್​ಗಳ ಚಟುವಟಿಕೆ ಆರಂಭಿಸಲು ಅವಕಾಶ ನೀಡುವಂತೆ ಕೋರಿಕೆ ಬಂದಿವೆ. ಕೇಂದ್ರದ ಅನುಮತಿ ಸಿಕ್ಕರಷ್ಟೇ ಅವಕಾಶ ನೀಡಲಾಗುತ್ತದೆ. ದೇವಸ್ಥಾನಗಳನ್ನು ತೆರೆಯಲು ಕೇಂದ್ರದ ಅನುಮತಿಗೆ ಮನವಿ ಮಾಡಲಾಗಿದೆ. ಇದು ಚರ್ಚ್, ಮಸೀದಿಗೂ ಅನ್ವಯಿಸುತ್ತದೆ. ಪ್ರತಿಪಕ್ಷದ ನಾಯಕರು ಏನು ಹೇಳಿದ್ದಾರೆ ಎನ್ನುವುದಕ್ಕಿಂತ ಈ ನೆಲದ ಕಾನೂನು ಎಲ್ಲರಿಗೂ ಒಂದೇ ಎನ್ನುವುದು ಮುಖ್ಯವಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು. ಧರ್ಮಸ್ಥಳ ಮಂಜುನಾಥ ದೇಗುಲ ತೆರೆದು ದರ್ಶನಕ್ಕೆ ಜೂ.1ರಿಂದ ಅವಕಾಶ ಕಲ್ಪಿಸಲು ಕೆಲವು ನಿಬಂಧನೆ ಒಳಗೊಂಡಂತೆ ಶ್ರೀ ವೀರೇಂದ್ರ ಹೆಗ್ಗಡೆ ಭಕ್ತರಿಗೆ ಸೂಚನೆ ಕೊಟ್ಟಿದ್ದಾರೆ. ವಾಸ್ತವ್ಯಕ್ಕೆ ಅವಕಾಶವಿಲ್ಲ. ದರ್ಶನ ಮಾಡಿಕೊಂಡು ಹೋಗಬಹುದು ಎಂದು ಹೇಳಿದ್ದಾರೆ. ಎಲ್ಲ ಕಡೆಯೂ ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿರುತ್ತದೆ ಎಂದರು.

ದೇವಸ್ಥಾನ ತೆರೆಯುವುದು ಸರ್ಕಾರದ ತೀರ್ವನ. ನಾವೇನು ಮಾಡೋಣ. ಅವರು ನಮ್ಮನ್ನೇನು ಕೇಳಲಿಲ್ಲ. ಎಲ್ಲದಕ್ಕೂ ಅವರೇ ಜವಾಬ್ದಾರರು. ರೈತರು, ಕೂಲಿ ಕಾರ್ವಿುಕರನ್ನು ಹೇಗೆ ನಡೆಸಿಕೊಂಡರು ಎಂಬುದು ಗೊತ್ತಿದೆ. ಇನ್ನೇನು ಮಾಡುತ್ತಾರೋ ಮಾಡಲಿ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net