

ಹೊಸಪೇಟೆ: ಕರೊನಾ ಭೀತಿ ಹಿನ್ನೆಲೆಯಲ್ಲಿ ನಗರದ ನೆಹರೂ ಕಾಲನಿ ಶ್ರೀಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್‌ನಿಂದ ಮಾ.26 ರಂದು ಆಯೋಜಿಸಿದ್ದ ರಥೋತ್ಸವ ರದ್ದುಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಡಾ.ಶ್ರೀಸಂಗನಬಸವ ಸ್ವಾಮೀಜಿ ತಿಳಿಸಿದರು.
ಕರೊನಾ ವೈರಸ್ ತಡೆಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ತೆಗೆದುಕೊಂಡ ಮುಂಜಾಗ್ರತಾ ಕ್ರಮಕ್ಕೆ ಧಾರ್ಮಿಕ ಕೇಂದ್ರಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕಾದದ್ದು ಕರ್ತವ್ಯ. ಆದ್ದರಿಂದ ಮಾ.25 ರಂದು ನಡೆಯುವ ಅಗ್ನಿಕುಂಡ, 26ರ ರಥೋತ್ಸವ ಮತ್ತು 27ರ ಕಡುಬಿನ ಕಾಳಗ ಇದೇ ಮೊದಲ ಬಾರಿಗೆ ರದ್ದುಗೊಳಿಸಲಾಗಿದೆ. ಭಕ್ತರು ಮನೆಗಳಲ್ಲಿಯೇ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ದೇವಸ್ಥಾನ ಸಮಿತಿ ಕಾರ್ಯದರ್ಶಿ ಅಶ್ವಿನಿಕೋತಂಬ್ರಿ, ವೀರಶೈವ ಸಮುದಾಯದ ಅಧ್ಯಕ್ಷ ಎಚ್.ಶರಣಸ್ವಾಮಿ, ಜಿಲ್ಲಾ ಅಧ್ಯಕ್ಷ ಸಾಲಿಸಿದ್ದಯ್ಯ ಸ್ವಾಮಿ, ಮುಖಂಡರಾದ ಗೊಗ್ಗ ಗುರುಬಸವರಾಜ, ಕೆ.ಕೊಟ್ರೇಶ, ಗಂಗಾಧರ, ನಿಂಗಪ್ಪ ಇತರರಿದ್ದರು.
ಪರಿಸರ ನಾಶದಿಂದ ಪ್ರಕೃತಿ ಅಸಮತೋಲನ ಉಂಟಾಗಿ ದೇಶದಲ್ಲಿ ನಾನಾ ಕಾಯಿಲೆಗಳು ಮನಷ್ಯರನ್ನು ಬಾಧಿಸುತ್ತ್ತಿವೆ. ಹಿರಿಯರು ಹಾಕಿಕೊಟ್ಟ ಸಂಸ್ಕಾರಗಳನ್ನು ಅಲಕ್ಷಿಸಬಾರದು. ಕರೊನಾಕ್ಕೆ ಔಷಧವಿಲ್ಲ. ಆರೋಗ್ಯ ಇಲಾಖೆ ಸೂಚನೆಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ಪರಿಸ್ಥಿತಿ ಮುಂದುವರಿದರೆ ಸ್ವಾಮೀಜಿಗಳು ಸಹ ಊರುಬಿಟ್ಟು ಗುಡ್ಡ ಸೇರಬೇಕಾಗುತ್ತದೆ ಎಂದು ಡಾ.ಸಂಗನಬಸವ ಸ್ವಾಮೀಜಿ ಹೇಳಿದರು.