

ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ನೂತನ ಉತ್ತರಾಧಿಕಾರಿಯ ಪಟ್ಟಾಭಿಷೇಕ ಭಾನುವಾರ (ಡಿ.15) ನಡೆಯಲಿದೆ. ಮಠದ ಉತ್ತರಾಧಿಕಾರಿಯಾಗಲಿರುವ ನಿವೃತ್ತ ಕೆಎಎಸ್ ಅಧಿಕಾರಿ ಡಾ. ಎಚ್.ಎಲ್.ನಾಗರಾಜ್ ಅವರು ಸನ್ಯಾಸ ದೀಕ್ಷೆ ಪಡೆದು ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೆಸರಿನಿಂದ ಮಠದ ಉಸ್ತುವಾರಿಯನ್ನು ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಠದ ಪೀಠಾಧ್ಯಕ್ಷ ಸ್ಥಾನವನ್ನು ತ್ಯಜಿಸಲಿರುವ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಆದಿಚುಂಚನಗಿರಿ ಪೀಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಸೇರಿ ನಾಡಿನ ಇತರ ಮಠಾಧೀಶರು, ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಶನಿವಾರ ಸಂಜೆ ನೂತನ ಪೀಠಾಧಿಪತಿಗಳ ಪಟ್ಟಾಭಿಷೇಕದ ವಿಧಿ-ವಿಧಾನಗಳು ಆರಂಭವಾದವು. ಡಾ.ನಾಗರಾಜ್ ಅವರ ಕುಟುಂಬದವರು ಹಾಗೂ ಸಮುದಾಯದ ಹಿರಿಯರು ಮತ್ತು ಮಠದ ಟ್ರಸ್ಟಿಗಳು ಹಾಜರಿದ್ದು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಭಾನುವಾರದ ಪಟ್ಟಾಭಿಷೇಕದ ಸಮಾರಂಭಕ್ಕೆ ನಾಡಿನ ವಿವಿಧೆಡೆಯಿಂದ ಸಾವಿರಾರು ಮಂದಿ ಆಗಮಿಸಲಿದ್ದಾರೆ. ಇವರೆಲ್ಲರೂ ಪಾಲ್ಗೊಳ್ಳಲು ಅವಕಾಶವಾಗುವಂತೆ ವಿವಿಧ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಮಠದ ಟ್ರಸ್ಟಿಗಳು ತಿಳಿಸಿದ್ದಾರೆ.