ಭಗವಾನ್ ಪಾರ್ಶ್ವನಾಥ ತೀರ್ಥಂಕರರ ರಾಜ್ಯಾಭಿಷೇಕ

New Kali Varur New
Published on

ಹುಬ್ಬಳ್ಳಿ : ಇಲ್ಲಿಗೆ ಸಮೀಪದ ವರೂರಿನಲ್ಲಿರುವ ನವಗ್ರಹ ತೀರ್ಥ ಕ್ಷೇತ್ರದಲ್ಲಿ ನಡೆಯುತ್ತಿರುವ ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ಶನಿವಾರದಂದು ಭಗವಾನ್ ಪಾರ್ಶ್ವನಾಥ ತೀರ್ಥಂಕರರ ರಾಜ್ಯಾಭಿಷೇಕ ಕಾರ್ಯಕ್ರಮವು ವೇದಿಕೆ ಮೇಲೆ ವಿಶೇಷವಾಗಿ ನಿರ್ವಿುಸಿದ್ದ ರಾಜಮಹಲ್​ನಲ್ಲಿ ಸಂಭ್ರಮದಿಂದ ಜರುಗಿತು.

ಪೂರ್ತಿ ಹೂವಿನಿಂದಲೇ ಅಲಂಕೃತವಾಗಿದ್ದ ರಾಜಮಹಲ್ ಮಂಟಪದ ಒಂದೆಡೆ ಗುರುದೇವ ಆಚಾರ್ಯ ಶ್ರೀ ಕುಂಥುಸಾಗರ ಮಹಾರಾಜರು ಮತ್ತು ಅವರ ಶಿಷ್ಯವೃಂದ ಉಪಸ್ಥಿತರಿದ್ದು ಆಶೀರ್ವಾದ ಮಾಡಿದರು. ಪಂಡಿತರ ಮಂಡಳಿ ಮುಹೂರ್ತ ನಿಗದಿ ಮಾಡುವುದರಿಂದ ಹಿಡಿದು ದೀಕ್ಷೆ ಸ್ವೀಕಾರದವರೆಗೆ ಇಡೀ ಕಾರ್ಯಕ್ರಮವನ್ನು ಹಾಡು, ನೃತ್ಯ, ಅಭಿನಯಗಳೊಂದಿಗೆ ಪ್ರಸ್ತುತಪಡಿಸಲಾಯಿತು.

ಸಾಮ್ರಾಜ್ಯ ವೈಭವ ಎಂದು ಕರೆಯಲಾಗುವ ಈ ಕಾರ್ಯಕ್ರಮದಲ್ಲಿ ಚಕ್ರವರ್ತಿಗೆ ವೈರಾಗ್ಯ ಪ್ರಾಪ್ತಿಯಾಗಿ ಪುತ್ರ ಪಾರ್ಶ್ವನಾಥರಿಗೆ ಪಟ್ಟ ಕಟ್ಟುತ್ತಾರೆ. ಪಾರ್ಶ್ವನಾಥರ ಪಂಚಲೋಹದ ಪ್ರತಿಮೆ ಮತ್ತು ಶಿಲಾ ಮೂರ್ತಿಗೆ ಸುಮಂಗಲಿಯರಿಂದ ಮಂಗಲ ಸ್ನಾನ ಮತ್ತು ಅಭಿಷೇಕದ ನಂತರ ಅಲಂಕಾರ ಮಾಡಿ ವಸ್ತ್ರಧಾರಣೆ ಮಾಡಲಾಯಿತು.

ಚಕ್ರವರ್ತಿ ವೇಷಭೂಷಣ ತೊಟ್ಟಿದ್ದ ಮುಂಬೈನ ರಾಜೇಶ ಕೊಟಾಡಿ, ಇಂದ್ರ ಇಂದ್ರಾಣಿಯರಾಗಿದ್ದ ನವಲಗುಂದದ ವಿದ್ಯಾಧರ ಪಾಟೀಲ ದಂಪತಿ ಯುವರಾಜನನ್ನು ಸಿಂಹಾಸನದ ಮೇಲೆ ಕೂರಿಸಿ ಬಂಗಾರದ ಹಾರ ಹಾಕಿ, ಮುಕುಟ ತೊಡಿಸಿ ರಾಜ್ಯಾಭಿಷೇಕ ನೆರವೇರಿಸಿದರು. ಇಂದ್ರಾಣಿ ಮತ್ತು ಮಾತೆ ನೂತನ ರಾಜನಿಗೆ ತಿಲಕವಿಟ್ಟು ಹರಿಸಿದರು. ನಂತರ ರಾಜ್ಯಭಾರ, ಪಾರ್ಶ್ವನಾಥರ ವೈರಾಗ್ಯದ ಗೀತೆ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆದವು.

ಇದೇ ಸಂದರ್ಭದಲ್ಲಿ ಆಚಾರ್ಯ ಶ್ರೀ ಕುಂಥುಸಾಗರ ಮಹಾರಾಜರು ತಮ್ಮ ಶಿಷ್ಯ ವರೂರು ನವಗ್ರಹತೀರ್ಥ ಕ್ಷೇತ್ರದ ರೂವಾರಿ, ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರ ನಂದಿ ಮಹಾರಾಜರಿಗೆ ಸನ್ಮಾನ ಪತ್ರ ನೀಡಿ, ಗೌರವಿಸಿದರು. ಗುರು ಕುಂಥುಸಾಗರ ಮಹಾರಾಜರ ಪಾದಪೂಜೆಯನ್ನು ಶಿಷ್ಯಗಣವು ನೆರವೇರಿಸಿತು. ಆಚಾರ್ಯ ಶ್ರೀ ದೇವನಂದಿ ಮಹಾರಾಜರು ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಸುರೇಂದ್ರ ಹೆಗ್ಗಡೆ, ಸುಮೇರು ಪರ್ವತ ನಿಮಾಣಕ್ಕೆ ನಮ್ಮಂಥವರಿಗೆ ವಿನ್ಯಾಸ ಮಾಡಲು ವರ್ಷಗಟ್ಟಲೇ ಸಮಯ ಬೇಕಾಗುತ್ತಿತ್ತು. ಆದರೆ, ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಸಂಕಲ್ಪ ಮಾಡಿದ ಕೂಡಲೇ ನಿಮಾಣ ಮಾಡಿ ತಮ್ಮ ಕರ್ತೃತ್ವ ಶಕ್ತಿ ತೋರಿಸಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ರಾಜ್ಯಾಭಿಷೇಕ ಕಾರ್ಯಕ್ರಮವನ್ನು ಕುಸ್ತಿಪಟು ಗ್ರೇಟ್ ಕಲಿ ಉದ್ಘಾಟಿಸಿದರು. ಮೈಸೂರು ಕನಕಗಿರಿಯ ಭುವನಕೀರ್ತಿ ಭಟ್ಟಾರಕರು, ನರಸಿಂಹರಾಜಪುರದ ಲಕ್ಷೀ ಸೇನ ಭಟ್ಟಾರಕರು, ಭಾರತೀಪುರದ ಸಿದ್ಧಾಂತಕೀರ್ತಿ ಮಹಾರಾಜ, ಸೋಂದೆಯ ಭಟ್ಟಾಕಳಂಕ ಮಹಾರಾಜ, ಶಾಂತಿ ಸಾಗರ ಮಹಾರಾಜರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಜೈನ ಸನ್ಯಾಸಿನಿಯರು, ಮಹೇಂದ್ರ ಸಿಂಘಿ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net