

ನಂಜನಗೂಡು: ಪಟ್ಟಣದಲ್ಲಿರುವ ದೇವೀರಮ್ಮನಹಳ್ಳಿಯ ಶರಣಸಂಗಮ ಪಟ್ಟದ ಮಠದಲ್ಲಿ ಶ್ರೀ ಶಿವಕುಮಾರಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ ಸಂಪನ್ನಗೊಂಡಿತು.
ಶ್ರೀಗುರು ಪಟ್ಟಾಧಿಕಾರ ಮಹೋತ್ಸವ ಹಾಗೂ ಧಾರ್ಮಿಕ ಸಭೆ ಮತ್ತು ಅಕ್ಕನಬಳಗದ 20ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಗಳು ಬುಧವಾರ ಯಶಸ್ವಿಯಾಗಿ ನೆರವೇರಿದವು.
ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು. ದೇವನೂರು ಮಹಾಂತ ಸ್ವಾಮೀಜಿ, ಮಲ್ಲನಮೂಲೆ ಚೆನ್ನಬಸವ ಸ್ವಾಮೀಜಿ, ವಾಟಾಳ್ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಲ್ಲಹಳ್ಳಿಯ ಇಮ್ಮಡಿ ಚೆನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಪಡಗೂರು ಶಿವಲಿಂಗೇಂದ್ರ ಸ್ವಾಮೀಜಿ, ಶಿರಮಳ್ಳಿ ಇಮ್ಮಡಿ ಮುರಗೀ ಸ್ವಾಮೀಜಿ, ಹರವೆಯ ಸರ್ಪಭೂಷಣ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧ್ಯಕ್ಷರು ಸಾನ್ನಿಧ್ಯ ವಹಿಸಿದ್ದರು.
ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ನಂಜನಗೂಡು ಕ್ಷೇತ್ರ ಪೌರಾಣಿಕ, ಧಾರ್ಮಿಕ, ಐತಿಹಾಸಿಕವಾಗಿ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಕಪಿಲಾ ನದಿ ತೀರದಲ್ಲಿರುವ ಶ್ರೀ ನಂಜುಂಡೇಶ್ವರನ ದರ್ಶನಕ್ಕೆ ದೇಶ-ವಿದೇಶಗಳಿಂದ ಭಕ್ತರು ತಂಡೋಪತಂಡವಾಗಿ ಬರುವುದು ಈ ಕ್ಷೇತ್ರದ ವಿಶೇಷವಾಗಿದೆ ಎಂದು ಹೇಳಿದರು.
ಇಂತಹ ಐತಿಹಾಸಿಕ ಕ್ಷೇತ್ರದಲ್ಲಿ ಶರಣ ಸಂಗಮ ಮಠವನ್ನು ನಾಗರಾಜೇಂದ್ರ ಸ್ವಾಮೀಜಿ 2001ರಲ್ಲಿ ಸ್ಥಾಪಿಸಿ ಭಕ್ತರಿಗೆ ಅನುಕೂಲ ಮಾಡಿದ್ದಾರೆ. ಇವರು ಸಮಾಜಕ್ಕೆ ಸೇವೆ ಸಲ್ಲಿಸುವ ಆಶಯವನ್ನು ಬಾಲಕನಾಗಿದ್ದಾಗಿನಿಂದಲೂ ಬೆಳೆಸಿಕೊಂಡಿದ್ದರಿಂದ ಇಂತಹ ದೊಡ್ಡ ಮಠ ಸ್ಥಾಪಿಸಲು ಸಾಧ್ಯವಾಯಿತು. ನಾಗರಾಜೇಂದ್ರ ಸ್ವಾಮೀಜಿ ನಂಜನಗೂಡು ತಾಲೂಕಿನ ಹೊಸಕೋಟೆ ಗ್ರಾಮದವರು. ತಮ್ಮ ಸೇವಾ ವೃತ್ತಿಯನ್ನು ಸುತ್ತೂರಿನಿಂದ ಪ್ರಾರಂಭಿಸಿ ಕಾಗಲವಾಡಿ, ಬಿಳಿಗೆರೆ, ನವಿಲೂರು, ದೇವನೂರು, ಕುರಹಟ್ಟಿ ಮಠಗಳಲ್ಲಿ ತಮ್ಮ ಸೇವೆ ಸಲ್ಲಿಸಿ ಶ್ರೀ ಗುರುಮಲ್ಲೇಶ್ವರ ಮಠಗಳಲ್ಲಿ ಕಂತೆ ಭಿಕ್ಷದ ಸೇವೆಯನ್ನು ಯಶಸ್ವಿಯಾಗಿ ಮತ್ತು ನಿಷ್ಠೆಯಿಂದ ಮಾಡಿ ನಂಜನಗೂಡಿನ ಈ ಸ್ಥಳದಲ್ಲಿ ಶರಣ ಸಂಗಮ ಮಠವನ್ನು ಸ್ಥಾಪಿಸಿರುವುದು ಇತಿಹಾಸ ಎಂದರು.
144 ವರ್ಷಗಳ ನಂತರ ಪ್ರಯಾಗ್‌ರಾಜ್ ಸಂಗಮದಲ್ಲಿ ಕುಂಭಮೇಳ ಯಶಸ್ವಿಯಾಗಿ ನಡೆಯಿತು. ಅಲ್ಲಿ ಗಂಗಾ, ಯಮುನಾ, ಗುಪ್ತಗಾಮಿನಿಯ ಸಂಗಮವಾಗಿ ಸರಸ್ವತಿ ನದಿ ಹರಿಯುತ್ತಿರುವುದನ್ನು ಭಕ್ತರು ನಂಬಿದ್ದಾರೆ. ಆ ಮೂರು ನದಿಗಳು ಸೇರುವ ಕ್ಷೇತ್ರ ಸಂಗಮವಾಗಿದೆ. ಅದೇ ರೀತಿ ತಿ.ನರಸೀಪುರದಲ್ಲಿ ಕಪಿಲಾ, ಕಾವೇರಿ, ಸ್ಫಟಿಕಾ ಸರೋವರಗಳ ಸಂಗಮವಾಗಿದೆ. ಈ ಹಿನ್ನೆಲೆಯಲ್ಲಿ ಶರಣ ಸಂಗಮ ಮಠ ಭಕ್ತರು ಸೇರುವ ಸಂಗಮವಾಗಿದೆ ಎಂದು ವಿಶ್ಲೇಷಿದರು.
ರಾಜ್ಯದಲ್ಲಿ ಮಠ-ಮಾನ್ಯಗಳು ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ನೀಡುವ ಕೇಂದ್ರಗಳಾಗಿದ್ದು, ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಬೇಕಾದಂತಹ ಎಲ್ಲ ಸೇವಾ ಕಾರ್ಯ ಮಾಡುತ್ತಿವೆ ಎಂದರು.
ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಶರಣ ಸಂಗಮ ಮಠಾಧ್ಯಕ್ಷ ನಾಗರಾಜೇಂದ್ರ ಸ್ವಾಮೀಜಿ ಸೇರಿದಂತೆ ಎಲ್ಲ ಮಠಾಧೀಶರು ನನಗೆ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಶ್ರೀ ಮಠದ ಅಭಿವೃದ್ಧಿಗಾಗಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಶಾಸಕ ಎಚ್.ಎಂ. ಗಣೇಶ್‌ಪ್ರಸಾದ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಅಭಾವೀಲಿಂಮಸ ಜಿಲ್ಲಾಧ್ಯಕ್ಷ ಹಿನಕಲ್ ಬಸವರಾಜು, ತಾಲೂಕು ಅಧ್ಯಕ್ಷ ಎಸ್.ಎಂ. ಕೆಂಪಣ್ಣ, ಹಗಿನವಾಳು ಚೆನ್ನಪ್ಪ, ವೀರಶೈವ ಮುಖಂಡ ಪೊನ್ನಾಚಿ ಮಹದೇವಸ್ವಾಮಿ, ರವಿ, ಅಕ್ಕನಬಳಗದ ಅಧ್ಯಕ್ಷೆ ಚಿನ್ನತಾಯಮ್ಮ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಗಿರೀಶ್, ಹಿರಿಯ ವಕೀಲ ನಂಜುಂಡಸ್ವಾಮಿ, ನಂಜಮ್ಮಣ್ಣಿ, ಗುರುಮಲ್ಲಪ್ಪ, ದೇವೀರಮ್ಮನಹಳ್ಳಿ ಗುರುಸಿದ್ದಪ್ಪ, ವಿದ್ಯಾನಗರ ಕೆ.ವಿ.ನಾಗೇಶ್, ನಾಗಸುಂದ್ರಪ್ಪ, ಆರ್.ವಿ.ಮಹದೇವಸ್ವಾಮಿ, ಮಾದಪ್ಪ, ಶಿವಲಿಂಗಪ್ಪ, ಪ್ರತಿಧ್ವನಿ ಜಿಲ್ಲಾಧ್ಯಕ್ಷ ತ್ರಿಣೇಶ್, ಎನ್.ಸಿ.ಬಸವಣ್ಣ, ಮಹೇಶ್ ಇತರರಿದ್ದರು.