ಭತ್ತ ಕೃಷಿ, ನೊಂದವರಿಗೆ ಸಾಂತ್ವನ, ಪ್ರಕೃತಿ ಚಿಕಿತ್ಸೆಗೆ ಆದ್ಯತೆ: ಡಾ.ವೀರೇಂದ್ರ ಹೆಗ್ಗಡೆ

heggade new
Published on

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ ಈಗ ನಡೆಯುವ ಅನೇಕ ಕಾರ್ಯಗಳ ಜತೆ ಭತ್ತ ಕೃಷಿ, ನೊಂದವರಿಗೆ ಸಾಂತ್ವನ, ಪ್ರಕೃತಿ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಕ್ಷೇತ್ರದ ಮಹೋತ್ಸವ ಸಭಾಭವನದಲ್ಲಿ ಶನಿವಾರ ತಮ್ಮ ಪಟ್ಟಾಭಿಷೇಕದ 53ನೇ ವರ್ಧಂತ್ಯುತ್ಸವ ಪ್ರಯುಕ್ತ ಗಣ್ಯರು, ಗ್ರಾಮಸ್ಥರು, ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಗೌರವ ಸ್ವೀಕರಿಸಿ ಮಾತನಾಡಿದರು.

ಕೂಲಿಯಾಳುಗಳ ಸಮಸ್ಯೆಯಿಂದ ಭತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದ್ದು, ಇದಕ್ಕೆ ಬೆಂಬಲವಾಗಿ ಸರ್ಕಾರ 160 ಕೃಷಿ ಯಂತ್ರ ಕೇಂದ್ರಗಳನ್ನು ನಡೆಸಲು ನೀಡಿದೆ. ಇದಕ್ಕೆ ಹೆಚ್ಚುವರಿಯಾಗಿ 15 ಕೋಟಿ ರೂ. ವೆಚ್ಚದಲ್ಲಿ ಕೃಷಿ ಯಂತ್ರಗಳನ್ನು ಖರೀದಿಸಿ ಕೃಷಿಗೆ ಪ್ರೋತ್ಸಾಹ ನೀಡಲಾಗಿದೆ. 8 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಕೃಷಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಸ್ಥಳೀಯ ಮತ್ತು ರಾಜ್ಯಾದ್ಯಂತ ಇರುವ ನಿರ್ಗತಿಕ ಕುಟುಂಬಗಳಿಗೆ ಮನೆ, ಮನೆ ಸಾಮಗ್ರಿ, ಚಿಕಿತ್ಸೆ ನೆರವು ನೀಡುವ ಉದ್ದೇಶದಿಂದ ವಾತ್ಸಲ್ಯ ಕಾರ್ಯಕ್ರಮ ರೂಪಿಸಲಾಗಿದ್ದು, 2 ಕೋಟಿ ರೂ. ಮೀಸಲಿಡಲಾಗಿದೆ. ಎಸ್‌ಡಿಎಂನ ಎಲ್ಲ ಶಿಕ್ಷಣ ಸಂಸ್ಥೆಗಳು ಗುಣಮಟ್ಟದಲ್ಲಿದ್ದು, ಎಸ್‌ಡಿಎಂ ಯುನಿವರ್ಸಿಟಿ, ಎಸ್‌ಡಿಎಂ ಮೆಡಿಕಲ್ ಕಾಲೇಜು ಸೇರಿದಂತೆ ಇಡೀ ದೇಶದಲ್ಲೇ ನಂ.1 ಸ್ಥಾನದಲ್ಲಿವೆ. ಪ್ರಕೃತಿ ಚಿಕಿತ್ಸೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಬೆಂಗಳೂರಿನ ನೆಲಮಂಗಲದಲ್ಲಿ ಮೂರನೇ ಪ್ರಕೃತಿ ಚಿಕತ್ಸಾ ಆಸ್ಪತ್ರೆ ನಿರ್ಮಾಣವಾಗುತ್ತಿದೆ ಎಂದರು.

ಇದುವರೆಗೆ 250 ಹಳೇ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಗ್ರಾಮಸ್ಥರೇ ನಿರ್ಮಿಸಿರುವ 1,135 ದೇವಾಲಯಗಳಿಗೆ 14 ಕೋಟಿ ರೂ. ನೆರವು ನೀಡಲಾಗಿದೆ ಎಂದು ತಿಳಿಸಿದರು.

ಅನ್ನಛತ್ರ ವಿಸ್ತರಣೆ

ಕ್ಷೇತ್ರದಲ್ಲಿ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈಗಿರುವ ಅನ್ನಪೂರ್ಣ ಅನ್ನಛತ್ರದ ಮೇಲೆ ಅಷ್ಟೇ ವಿಸ್ತಾರದ ಅನ್ನಛತ್ರ ನಿರ್ಮಿಸಲಾಗುವುದು. ದೇವರ ದರ್ಶನಕ್ಕೆ ಕ್ಯೂ ಕಾಂಪ್ಲೆಕ್ಸ್ ರಚನೆ, ಆನ್‌ಲೈನ್ ಬುಕ್ಕಿಂಗ್ ಸೇವೆ, ಇ-ಕಾಣಿಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೆಗ್ಗಡೆಯವರು ತಿಳಿಸಿದರು.

20 ಸಾವಿರ ಟ್ಯಾಬ್ ಬುಕಿಂಗ್

ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅತ್ಯಂತ ಯಶಸ್ಸಿನ ಕಾರ್ಯಕ್ರಮ. ಈಗಾಗಲೇ 40 ಲಕ್ಷ ಕುಟುಂಬಗಳು ಇದರಲ್ಲಿವೆ. ಇದಕ್ಕೆ ಇನ್ನೂ ಪ್ರೋತ್ಸಾಹ ನೀಡುವಂತೆ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕಲಿಕೆಗೆ ಅನುಕೂಲವಾಗಲು ಇಪ್ಪತ್ತು ಸಾವಿರ ಟ್ಯಾಬ್‌ಗಳನ್ನು ಬುಕ್ಕಿಂಗ್ ಮಾಡಲಾಗಿದ್ದು, ಉನ್ನತ ಶಿಕ್ಷಣ ಮಾಡುವವರಿಗೆ 10 ಸಾವಿರ ಲ್ಯಾಪ್‌ಟಾಪ್‌ಗಳನ್ನು ಬುಕ್ಕಿಂಗ್ ಮಾಡಲಾಗಿದೆ ಎಂದು ಹೆಗ್ಗಡೆಯವರು ತಿಳಿಸಿದರು. ಇದಕ್ಕೆ 21 ಕೋಟಿ ರೂ.ಮೀಸಲಿಡಲಾಗಿದೆ. ಕೆರೆ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ನೀಡಲಾಗಿದೆ. ಸಿರಿಧಾನ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಅದಕ್ಕಾಗಿ ರೈತ ಉತ್ಪಾದಕರ ಸಂಘ ಪ್ರಾರಂಭಿಸಲಾಗಿದೆ. 4 ಲಕ್ಷ ಶೌಚಗೃಹ ನಿರ್ಮಾಣಕ್ಕೆ ನೆರವು ನೀಡಲಾಗಿದೆ ಎಂದರು.

ಲಕ್ಷ ದೀಪೋತ್ಸವ ಬಳಿಕ ತಿರುಗಾಟ

ಕರೊನಾ ಮಹಾಮಾರಿಯಿಂದ ಯಕ್ಷಗಾನಕ್ಕೂ ತೊಂದರೆಯಾಗಿದ್ದು, ಕಲಾವಿದರಿಗೆ ಮತ್ತು ಕಲಾಸಕ್ತರಿಗೆ ಅನುಕೂಲವಾಗುವಂತೆ ಕ್ಷೇತ್ರದಲ್ಲೇ 30 ದಿನಗಳ ಕಾಲ ಯಕ್ಷಗಾನ ಪ್ರದರ್ಶನ ಮಾಡಲಾಗುತ್ತಿದ್ದು, ಲಕ್ಷದೀಪೋತ್ಸವದ ಬಳಿಕ ತಿರುಗಾಟ ನಡೆಸಲಾಗುವುದು. ಮಾನವ ಸಂಬಂಧಗಳು, ಮಾನ ಮೌಲ್ಯಗಳ ಹೊಂದಾಣಿಕೆ ಮಾಡುವುದೇ ನಮ್ಮ ಉದ್ದೇಶವಾಗಿದ್ದು, ಕ್ಷೇತ್ರದ ವಿವಿಧ ವಿಭಾಗಗಳ ಕಾರ್ಯಕ್ಕೆ ಪ್ರೋತ್ಸಾಹ ನೀಡುವುದೇ ನಮ್ಮ ಉದ್ದೇಶ ಎಂದು ಹೆಗ್ಗಡೆ ಹೇಳಿದರು.

ಸೇವೆಗೆ ನಿದರ್ಶನ

ಹಾವೇರಿ ಗೋಟಗೋಡಿ ಕರ್ನಾಟಕ ಜನಪದ ವಿವಿ ನಿವೃತ್ತ ಉಪಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಮಾತನಾಡಿ, 53 ವರ್ಷಗಳ ಹಿಂದೆ 20ನೇ ವರ್ಷದಲ್ಲಿ ಪಟ್ಟಾಭಿಷಿಕ್ತರಾಗಿ ಡಾ.ವೀರೇಂದ್ರ ಹೆಗ್ಗಡೆಯವರು ಮಾಡಿದ ಸೇವೆಗಳು ವರ್ಣಿಸಲು ಅಸಾಧ್ಯವಾದುದು. ಧರ್ಮಸ್ಥಳದ ಧರ್ಮ ಮಾನವ ಧರ್ಮ. ದೈವಿಕ ಶಕ್ತಿ ಮತ್ತು ಸಾಮಾಜಿಕ ಶಕ್ತಿಯೇ ಇವರ ಸೇವೆಗೆ ಕಾರಣ. ಹಲವಾರು ಧಾರ್ಮಿಕ ಕ್ಷೇತ್ರಗಳಿಗೆ ದೇವರನ್ನು ನೋಡಲು, ಪ್ರಾರ್ಥಿಸಲು ಬರುವವರು ಹೆಚ್ಚು. ಆದರೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ದೇವರನ್ನು ನೋಡುವುದರ ಜತೆಗೆ ಡಾ.ಹೆಗ್ಗಡೆಯವರನ್ನು ಭೇಟಿಯಾಗಲು ಬರುವವರೇ ಹೆಚ್ಚು. ಇದು ಡಾ.ಹೆಗ್ಗಡೆಯವರ ಸೇವೆಗೆ ನಿದರ್ಶನ ಎಂದರು.

ಗೌರವಾರ್ಪಣೆ

ಕ್ಷೇತ್ರದ ಸಿಬ್ಬಂದಿ ಹರಿನಾರಾಯಣ ನೂರಿತ್ತಾಯ, ಕೃಷ್ಣಕುಮಾರ್ ಶೆಟ್ಟಿ, ಶಂಕರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ದೀಪ ಫಡ್ಕೆ ಬರೆದ ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ಹೆಗ್ಗಡೆ ಪುಸ್ತಕ ಬಿಡುಗಡೆಗೊಳಿಸಲಾಯಿತು. ಡಾ.ಹೆಗ್ಗಡೆಯವರ ಪರಿಚಯದ ಕುರಿತಾದ ವಿಡಿಯೋವನ್ನು ಹೇಮಾವತಿ ವಿ.ಹೆಗ್ಗಡೆ ಬಿಡುಗಡೆಗೊಳಿಸಿದರು.

ಹೇಮಾವತಿ ವಿ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಡಿ.ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು. ಧರ್ಮಸ್ಥಳ ಕಚೇರಿ ಮುಖ್ಯ ಲೆಕ್ಕಾಧಿಕಾರಿ ಪುರಂದರ ಭಟ್ ಸ್ವಾಗತಿಸಿದರು. ಧರ್ಣಪ್ಪ ಮಾಸ್ಟರ್ ವಂದಿಸಿದರು. ರುಡ್‌ಸೆಟ್‌ನ ಅನುಸೂಯ ಮತ್ತು ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ವರದಿಗೆ ಸ್ಪಂದನೆ

ಮಾಧ್ಯಮಗಳ ಮಾನವೀಯ ಸ್ಪಂದನೆ ವರದಿಗಳನ್ನು ಆಧರಿಸಿ ವಾತ್ಸಲ್ಯ ಎಂಬ ಯೋಜನೆ ಪ್ರಾರಂಭಿಸಲಾಗಿದೆ ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಇತ್ತೀಚೆಗೆ ನಿಡ್ಲೆ ಎಂಬಲ್ಲಿ ಮಹಿಳೆಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದ ಬಗ್ಗೆ ವಿಜಯವಾಣಿ ವರದಿ ಮಾಡಿತ್ತು. ಈ ವರದಿ ನೋಡಿದ ಹೇಮಾವತಿ ವಿ.ಹೆಗ್ಗಡೆಯವರು ಮೂರು ಗಂಟೆಯೊಳಗೆ ಸ್ಪಂದಿಸಿ ನೆರವು ನೀಡಿದ್ದು, ಈಗ ಮಹಿಳೆಗೆ ಚಿಕಿತ್ಸೆ ಲಭಿಸಿ ಗುಣವಾಗುಂತಾಗಿದೆ. ಹೀಗೆ ಹಲವಾರು ಕುಟುಂಬಗಳಿದ್ದು, ಇಂತಹ ವರದಿ ಮೂಲಕ ಗಮನಕ್ಕೆ ತಂದರೆ ವಾತ್ಸಲ್ಯ ಯೋಜನೆ ಈ ಕುಟುಂಬಗಳಿಗೆ ಆಶ್ರಯವಾಗುತ್ತದೆ ಎಂದರು.

ನವಭಾರತ ನಿರ್ಮಾಣವಾಗಲಿ

ಕೋವಿಡ್ ಬಾಧೆಯಿಂದ ಹಲವಾರು ದೇಶಗಳು ಸಂಕಷ್ಟಕ್ಕೀಡಾಗಿವೆ. ಅನೇಕ ಜೀವಗಳಿಗೆ ಹಾನಿಯಾಗಿದೆ. ಆದರೆ ಭಾರತೀಯರ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ನಮ್ಮ ದೇಶದ ಸ್ಥಿತಿ ಉತ್ತಮವಾಗಿದೆ. ಮುಂದಿನ ದೀಪಾವಳಿ ಬಳಿಕ ಎಲ್ಲವೂ ಸಹಜ ಸ್ಥಿತಿಗೆ ಮರಳಿ ನವಭಾರತ ನಿರ್ಮಾಣವಾಗಲಿ. ಅಣುಬಾಂಬ್ ಬಿದ್ದ ಬಳಿಕ ಜಪಾನ್ ದೇಶ ಶೀಘ್ರವಾಗಿ ಸಹಜ ಸ್ಥಿತಿಗೆ ಬಂದದ್ದನ್ನು ಗಮನಿಸಬಹುದು. ಅದೇ ರೀತಿ ಭಾರತವೂ ಮುಂದಿನ ದೀಪಾವಳಿ ನಂತರ ಸಹಜ ಸ್ಥಿತಿಗೆ ಬಂದು ವ್ಯಾಪಾರ, ವ್ಯವಹಾರಗಳು ಅಭಿವೃದ್ಧಿಯಾಗಲಿದೆ. ಯಾರೂ ಧೃತಿಗೆಡದೆ ಮುಂದಿನ ಉತ್ತಮ ದಿನಗಳನ್ನು ಎದುರು ನೋಡಬೇಕು ಎಂದು ಡಾ.ಹೆಗ್ಗಡೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net