ಕರೊನಾ ತಡೆಗೆ ಸಮರೋಪಾದಿ ಸೇವೆ ಅಗತ್ಯ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚನೆ

DC meeting
Published on

ಬೆಂಗಳೂರು: ಕರೊನಾ ಸೋಂಕಿನ ಹರಡುವಿಕೆ ನಿಯಂತ್ರಿಸಲು ಎಲ್ಲ ಅಧಿಕಾರಿಗಳು ಸಮರೋಪಾದಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರೊನಾ ನಿಯಂತ್ರಣ ಕುರಿತ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಕರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಬೆಂಗಳೂರು ಗ್ರಾಮಾಂತರ ಹಾಗೂ ವಿಜಯಪುರ ಜಿಲ್ಲೆಗಳಲ್ಲೂ ಸೋಂಕು ಪತ್ತೆಯಾಗಿರುವುದು ಎಚ್ಚರಿಕೆ ಸಂದೇಶವಾಗಿದೆ. ವೈದ್ಯಾಧಿಕಾರಿಗಳಿಗೆ ಸಹಕರಿಸುವ ಮೂಲಕ ಅಧಿಕಾರಿಗಳು ಸೋಂಕು ನಿಯಂತ್ರಣಕ್ಕೆ ಶ್ರಮಿಸಬೇಕು ಎಂದು ಹೇಳಿದರು.

ವಿಶೇಷಾಧಿಕಾರಿ ನೇಮಕ: ಹೊಸಕೋಟೆ ತಾಲೂಕಿನ ಬೈಲನರಸಾಪುರದಲ್ಲಿ ನಾಲ್ಕು ಪ್ರಕರಣ ಪತ್ತೆಯಾದ ಹಿನ್ನೆಲೆ ಗ್ರಾಮದಲ್ಲಿ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿರುವುದರಿಂದ ಸೋಂಕಿನ ತೀವ್ರತೆ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈಗಾಗಲೇ ಜಿಲ್ಲಾ ಹಂತದಲ್ಲಿ ಸೋಂಕಿನ ನಿಯಂತ್ರಣಕ್ಕೆ ಯೋಜನೆ ರೂಪಿಸಲಾಗಿದ್ದು, ತಾಲೂಕು ಹಾಗೂ ಗ್ರಾಮಮಟ್ಟದಲ್ಲಿಯೂ ತುರ್ತಾಗಿ ಸಮರ್ಪಕ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಲಸೆ ಹಾಗೂ ಕಟ್ಟಡ ಕಾರ್ಮಿಕರಿಗೆ ದುಡಿಯಲು ಅವಕಾಶವಿಲ್ಲದ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಆಹಾರ ಹಾಗೂ ವಸತಿ ಸೌಕರ್ಯ ಒದಗಿಸಲಾಗಿದ್ದು, ಎಸ್‌ಡಿಆರ್‌ಎಫ್ ಅನುದಾನ ಹಾಗೂ ದಾನಿಗಳ ಸಹಕಾರದೊಂದಿಗೆ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಗಂಭೀರತೆ ಅರಿತು ನಿರ್ಲಕ್ಷ್ಯಕ್ಕೆ ಅವಕಾಶ ನೀಡದೆ ಕಾರ್ಮಿಕರಿಗೆ ಒದಗಿಸಲಾಗುತ್ತಿರುವ ಆಹಾರ ಹಾಗೂ ವಸತಿ ಸೌಕರ್ಯ ಸೇರಿ ಇತರೆ ಮೂಲಸೌಕರ್ಯಗಳಲ್ಲಿ ಗುಣಮಟ್ಟದ ಕೊರತೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಹೇಳಿದರು.

ಹಸಿವಿನಿಂದ ಬಳಲಬಾರದು: ಯಾರು ಸಹ ಹಸಿವಿನಿಂದ ಬಳಲಬಾರದು ಎಂಬ ನಿಟ್ಟಿನಲ್ಲಿ ನಾಲ್ಕು ತಿಂಗಳಿಗೆ ಆಗುವಷ್ಟು ಪಡಿತರವನ್ನು ಮುಂಚಿತವಾಗಿ ನೀಡಲಾಗುತ್ತಿದೆ. ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದವರಿಗೂ ಪಡಿತರ ವಿತರಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿದ್ದು, ಅದರಂತೆ ಅವರಿಗೂ ಪಡಿತರವನ್ನು ನೀಡಬೇಕು. ಒಟ್ಟಿನಲ್ಲಿ ಅಧಿಕಾರಿಗಳು ಪಡಿತರ ವಿತರಣೆಯನ್ನು ಸಮರ್ಪಕವಾಗಿ ನೀಡಲು ಕ್ರಮವಹಿಸುವ ಮೂಲಕ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಿಇಒ ಎನ್.ಎಂ.ನಾಗರಾಜ್ ತಿಳಿಸಿದರು. ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಮಂಜುನಾಥ್, ಜಿಪಂ ಉಪ ಕಾರ್ಯದರ್ಶಿ ಕರಿಯಪ್ಪ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಟಿ.ಆರ್.ಶೋಭಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ಇದ್ದರು.

ವೈದ್ಯರು ಸೇರಿ ವೈದ್ಯಕೀಯ ಸಿಬ್ಬಂದಿ ವೈಯಕ್ತಿಕ ಸುರಕ್ಷತೆಗೆ ಆದ್ಯತೆ ನೀಡಬೇಕು. ಕರೊನಾ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಸುರಕ್ಷತಾ ಸಾಮಾಗ್ರಿ ಕೊರತೆಯಾಗದಂತೆ ಎಚ್ಚರ ವಹಿಸಬೇಕು. ಪಿ.ಎನ್.ರವೀಂದ್ರ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net