ಪ್ರವಾಸೋದ್ಯಮಕ್ಕಿಲ್ಲ ಕರೊನಾ ಆತಂಕ

mysore
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮತ್ತೆ ಕರೊನಾ ಆತಂಕ ಶುರುವಾಗಿರುವುದು ಮೈಸೂರು ಪ್ರವಾಸೋದ್ಯಮವನ್ನು ಕಂಗೆಡಿಸಿದೆ. ಆದರೆ, ಸದ್ಯಕ್ಕೆ ಯಾವುದೇ ಪರಿಣಾಮಗಳು ಗೋಚರವಾಗದಿರುವುದು ನಿಟ್ಟುಸಿರು ಭಾವ ಮೂಡಿಸಿದೆ.


ಮನಸ್ಸಿನಲ್ಲಿ ಅಳುಕಿದ್ದರೂ ಏನೂ ಪರಿಣಾಮ ಬೀರುವುದಿಲ್ಲ ಎಂಬ ವಿಶ್ವಾಸ ಪ್ರವಾಸೋದ್ಯಮ ಅವಲಂಬಿತರದ್ದು. ಈ ಆಶಾಭಾವದೊಂದಿಗೆ ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ನಾಡಹಬ್ಬ ದಸರಾ ಮಹೋತ್ಸವದ ನಂತರ ಕ್ರಿಸ್‌ಮಸ್, ಹೊಸ ವರ್ಷಾಚರಣೆ ಮೈಸೂರು ಪ್ರವಾಸೋದ್ಯಮಕ್ಕೆ ದೊಡ್ಡ ಸೀಜನ್. ಸಹಸ್ರಾರು ಪ್ರವಾಸಿಗರು ದೇಶ-ವಿದೇಶಗಳಿಂದ ಸಾಂಸ್ಕೃತಿಕ ನಗರಿಗೆ ದೌಡಾಯಿಸುತ್ತಾರೆ.

ಇದರಿಂದ ಟೂರಿಸಂಗೆ ‘ಬೂಸ್ಟರ್ ಟಾನಿಕ್’ ದೊರೆಯುತ್ತದೆ. ಪ್ರವಾಸೋದ್ಯಮ ಚಟುವಟಿಕೆಗಳೂ ಬಿರುಸುಗೊಳ್ಳುವುದರಿಂದ ಆರ್ಥಿಕ ವ್ಯವಹಾರವೂ ಗರಿಗೆದರಲಿದೆ. ಇದರಿಂದ ಈ ಕ್ಷೇತ್ರಕ್ಕೂ ಹೊಸ ಚೈತನ್ಯ ದೊರೆಯುತ್ತದೆ. ಇಂತಹ ಸಂದರ್ಭದಲ್ಲೇ ಕೋವಿಡ್ ಆತಂಕ ಮೂಡಿಸುತ್ತಿರುವುದು ಬಹಳಷ್ಟು ಜನರನ್ನು ಚಿಂತೆಗೀಡು ಮಾಡಿದೆ.


ಕೇರಳದಲ್ಲಿ ಹೊಸ ತಳಿಯ ಜೆ.ಎನ್.1ರ ಸೋಂಕು ಹರಡುತ್ತಿದೆ. ರಾಜ್ಯದಲ್ಲೂ ಸೋಂಕು ಪ್ರಸರಣಗೊಳ್ಳುತ್ತಿದೆ. ಈಗಾಗಲೇ ಮೈಸೂರು ಜಿಲ್ಲೆಯಲ್ಲಿ 6 ಪ್ರಕರಣಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಕೋವಿಡ್ ಪರೀಕ್ಷೆಯನ್ನೂ ಮತ್ತೆ ಶುರು ಮಾಡಲಾಗಿದೆ. ಕೇರಳದಿಂದ ಜಿಲ್ಲೆ ಪ್ರವೇಶಿಸುವ ಎಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ.

mysore


60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ರೋಗಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೋವಿಡ್ ಲಕ್ಷಣ ಇರುವವರು ಟೆಸ್ಟ್ ಮಾಡಿಸಬೇಕು ಎಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗುತ್ತಿದೆ. ಇದರೊಂದಿಗೆ, ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ತಲಾ 5 ಹಾಸಿಗೆ, 2 ಆಕ್ಸಿಜನ್ ವೆಂಟಿಲೇಟರ್ ಸಿದ್ಧಪಡಿಸಲಾಗುತ್ತಿದೆ. ನಗರದ ಕೆ.ಆರ್.ಎಸ್. ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವಿಶೇಷ ವಾರ್ಡ್ ಸನ್ನದ್ಧಗೊಳಿಸಲಾಗಿದೆ.

ಕರೊನಾ ತಡೆಗೆ ಮತ್ತು ನಿಯಂತ್ರಣಕ್ಕೆ ಭರದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಬಿರುಸಿನಿಂದ ನಡೆದಿರುವ ಈ ಪ್ರಕ್ರಿಯೆಯಿಂದ ಜನರಲ್ಲಿ ಮತ್ತೆ ಕರೊನಾ ವಕ್ಕರಿಸಿದೆಯೇ ಎಂಬ ಅನುಮಾನ ಚಿಗುರೊಡೆದಿದೆ. ಇದೇ ಶಂಕೆ, ಆತಂಕ ಪ್ರವಾಸೋದ್ಯಮ ಅವಲಂಬಿತ ಉದ್ಯಮ ಕ್ಷೇತ್ರದವರಲ್ಲೂ ಮೂಡಿದೆ.
2020 ಮತ್ತು 2021ರ ಸಾಲಿನಲ್ಲಿ ಉಲ್ಬಣಿಸಿದ್ದ ಕೋವಿಡ್‌ನಿಂದ ಎಲ್ಲೆಡೆಯಂತೆ ಮೈಸೂರು ಪ್ರವಾಸೋದ್ಯಮವೂ ನೆಲಕಚ್ಚಿತ್ತು. ಲಾಕ್‌ಡೌನ್, ಪ್ರವಾಸಿತಾಣಗಳ ಬಂದ್ ಇನ್ನಿತರ ನಿರ್ಬಂಧಗಳಿಂದ ವ್ಯಾಪಾರ-ವಹಿವಾಟುಗಳು ಸ್ತಬ್ಧಗೊಂಡಿದ್ದವು. ಇದು ಪ್ರವಾಸೋದ್ಯಮದ ಮೇಲೂ ನೇರ ಪರಿಣಾಮ ಬೀರಿತ್ತು. ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ಪಂಚತಾರಾ ಹೋಟೆಲ್ ಮಾಲೀಕರವರೆಗೂ ಎಲ್ಲರೂ ಆರ್ಥಿಕ ನಷ್ಟಕ್ಕೆ ಸಿಲುಕಿದ್ದರು.

ಕೋವಿಡ್ ಸಂಕಷ್ಟದಿಂದ ಹೊರಬರಲಾಗದೆ ಬಹಳಷ್ಟು ಹೋಟೆಲ್‌ಗಳು ಮುಚ್ಚಿದವು. ಇನ್ನೂ ಕೆಲವರು ಬೇರೆ ಕ್ಷೇತ್ರಗಳಿಗೆ ವರ್ಗಾವಣೆಗೊಂಡರು. ನಲುಗಿದ್ದ ಪ್ರವಾಸೋದ್ಯಮ ಕಳೆದ ಎರಡು ವರ್ಷಗಳಿಂದ ಸುಧಾರಿಸಿಕೊಳ್ಳುತ್ತಿದೆ. ಇದು ಪೂರ್ಣಪ್ರಮಾಣದಲ್ಲಿ ಕೆಲವರಿಗೆ ಇನ್ನೂ ಸಾಧ್ಯವಾಗಿಲ್ಲ. ಅಷ್ಟರಮಟ್ಟಿಗೆ ಆರ್ಥಿಕ ನಷ್ಟವನ್ನು ಉಂಟು ಮಾಡಿದೆ. ಈಗ ಕೊಂಚ ನಿರಾಳವಾಗಿ, ನೆಮ್ಮದಿಯಿಂದ ಉಸಿರಾಡುವ ಸಂದರ್ಭದಲ್ಲಿ ಮತ್ತೆ ಆತಂಕ ಮೂಡಿಸಿದೆ. ಮತ್ತೊಮ್ಮೆ ಹೊಡೆತ ಕೊಡಲಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ ಈ ಸಂದರ್ಭದಲ್ಲಿ ಸಹಜ ಸ್ಥಿತಿ ಗೋಚರವಾಗುತ್ತಿರುವುದು ಪ್ರವಾಸೋದ್ಯಮದಲ್ಲಿ ಸಮಾಧಾನ ಮೂಡಿಸಿದೆ.

ಹೋಟೆಲ್‌ಗಳು ಭರ್ತಿ:


ಮತ್ತೆ ಕಾಣಿಸಿಕೊಂಡಿರುವ ಕರೊನಾ ಕಾಟಕ್ಕೆ ಪ್ರವಾಸಿಗರು ತಲೆಕೆಡಿಸಿಕೊಂಡಿಲ್ಲ ಎಂದೆನಿಸಿದೆ. ಕ್ರಿಸ್‌ಮಸ್ ಹತ್ತಿರವಾಗುತ್ತಿದ್ದಂತೆ ಪ್ರವಾಸಿಗರು ಅರಮನೆ ನಗರಿಯತ್ತ ದೌಡಾಯಿಸುತ್ತಿದ್ದಾರೆ. ವಾರಾಂತ್ಯ ರಜೆ, ಶಾಲಾ-ಕಾಲೇಜುಗಳಿಗೆ ಕ್ರಿಸ್‌ಮಸ್ ರಜೆ ಇರುವುದರಿಂದ ಕುಟುಂಬ ಸಹಿತ ಪ್ರವಾಸಿಗರು ಬರುತ್ತಿದ್ದಾರೆ. ನಗರದ ಬಹುತೇಕ ಕೊಠಡಿಗಳು ಬುಕ್ಕಿಂಗ್ ಆಗಿರುವುದು ಇದಕ್ಕೆ ಸಾಕ್ಷಿ.
ಕೇರಳ ಪ್ರವಾಸಿಗರು ಕಡಿಮೆ:

ಕೇರಳ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ. ಮೈಸೂರಿಗೆ ಬರುವ ಪ್ರವಾಸಿಗರಲ್ಲಿ ಕೇರಳ ಪ್ರವಾಸಿಗರೇ ಅಧಿಕ. ಬಳಿಕ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಕೇರಳದಲ್ಲಿ ಹೊಸ ತಳಿಯ ಸೋಂಕು ಹರಡುತ್ತಿರುವುದರಿಂದ ಅಲ್ಲಿಂದ ಪ್ರವಾಸಿಗರು ಬರುವುದು ಕಡಿಮೆಯಾಗಿದೆ.

ಯಾವುದೇ ನಿರ್ಬಂಧ ಇಲ್ಲ

ಕರೊನಾ ಹೊಸ ತಳಿಗೆ ಆತಂಕಪಡುವ ಅಗತ್ಯ ಇಲ್ಲ. ಆದರೆ, ಎಚ್ಚರಿಕೆ ಇರಬೇಕು. ಪ್ರವಾಸಿ ತಾಣಗಳನ್ನು ಬಂದ್ ಮಾಡಲ್ಲ. 60 ವರ್ಷ ಕೆಳಗಿನವರಿಗೆ ಮಾಸ್ಕ್ ಕಡ್ಡಾಯವಲ್ಲ. ಜನಸಂದಣಿ ಪ್ರದೇಶದಲ್ಲಿ ಮಾಸ್ಕ್ ಧರಿಸಿದರೆ ಒಳ್ಳೆಯದು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಕ್ರಿಸ್‌ಮಸ್, ವರ್ಷಾಚರಣೆಗೆ ನಿರ್ಬಂಧವನ್ನು ಹೇರಿಲ್ಲ. ಜನಸಂದಣಿ ನಿಯಂತ್ರಣಕ್ಕೆ ಪ್ರತ್ಯೇಕ ನಿಯಮ ಸಹ ಹೊರಡಿಸಿಲ್ಲ. ಇದರಿಂದ ಪ್ರವಾಸೋದ್ಯಮ ನಿಟ್ಟುಸಿರು ಬಿಟ್ಟಿದೆ. ಪ್ರವಾಸಿಗರು ಬರಲು ಯಾವುದೇ ಅಡ್ಡಿ ಉಂಟಾಗಿಲ್ಲ. ಈ ಎರಡು ಸಂಭ್ರಮದ ಮುಕ್ತ ಆಚರಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇದರಿಂದ ಪ್ರವಾಸಿಗರ ಸಂತಸಕ್ಕೆ ಭಂಗ ಉಂಟಾಗಿಲ್ಲ. ಹೀಗಾಗಿ, ಯಥಾಸ್ಥಿತಿ ಜೀವನ, ಸಂಭ್ರಮ, ವಹಿವಾಟುಗಳು, ಚಟುವಟಿಕೆಗಳು ಗರಿಗೆದರಲಿವೆ.


ಕ್ರಿಸ್‌ಮಸ್, ವರ್ಷಾಚರಣೆ ಸಂದರ್ಭದಲ್ಲೇ ಕರೊನಾ ಏಕೆ ಮರುಕಳುಹಿಸುತ್ತದೆ ಎಂಬುದು ಗೊತ್ತಾಗುತ್ತಿಲ್ಲ. ಆದರೆ, ಕೋವಿಡ್ ಈ ಸಲ ಪರಿಣಾಮ ಬೀರಲ್ಲ. ಎಲ್ಲೆಡೆಯಿಂದ ಪ್ರವಾಸಿಗರು ಬರುತ್ತಿದ್ದಾರೆ. ನಗರದ ಲಾಡ್ಜ್‌ಗಳಲ್ಲಿ ಎಲ್ಲ ಕೊಠಡಿಗಳು ಭರ್ತಿಯಾಗುತ್ತಿವೆ. ಆದ್ದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.

ಸಿ.ನಾರಾಯಣಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ

ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ನಿಯಂತ್ರಣದ ಕುರಿತು ಜಾಗೃತಿ ಮೂಡಿಸುವ ಭಿತ್ತಪತ್ರ ಪ್ರದರ್ಶಿಸಲಾಗಿದೆ.
ಡಾ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net